ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸ್ಕೌಟ್ಸ್, ಗೈಡ್ಸ್‌ನ ತಾಲೂಕು ಘಟಕದ ನೂತನ ಅಧ್ಯಕ್ಷ ಡಾ.ಪ್ರವೀಣ್ ಸೋಮಪ್ಪ ಅವರಿಗೆ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಅಧಿಕಾರ ಹಸ್ತಾಂತರಿಸಿದರು. ಪದ್ಮಶ್ರೀ, ರಾಣಿ ಮಾಚಯ್ಯ, ಕೆ.ಯು.ರಂಜಿತ್, ಎಂ.ಎಸ್.ಗಣೇಶ್, ಬೊಳ್ಳಜಿರ ಅಯ್ಯಪ್ಪ, ಸುಲೋಚನ, ದಮಯಂತಿ ಇತರರು ಇದ್ದರು. 
ಜಿಲ್ಲೆ

ಸ್ಕೌಟ್ಸ್, ಗೈಡ್ಸ್ ಚಳವಳಿಗೆ ಸಹಕರಿಸಿ

ವಸಂತಕುಮಾರ್ ಬಿ

ಕುಶಾಲನಗರ: ತಾಲೂಕಿ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಸ್ಕೌಟ್ಸ್, ಗೈಡ್ಸ್ ಸಭೆಯಲ್ಲಿ ಕುಶಾಲನಗರ ತಾಲೂಕು ಸ್ಕೌಟ್ಸ್, ಗೈಡ್ಸ್‌ನ ಅಧ್ಯಕ್ಷ ದೇವರಗುಂಡ ಡಾ. ಪ್ರವೀಣ್ ಸೋಮಪ್ಪ ಅವರಿಗೆ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಅಧಿಕಾರ ಹಸ್ತಾಂತರಿಸಿದರು.

ಭಾರತ್ ಸ್ಕೌಟ್ಸ್, ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕೆ.ಟಿ.ಬೇಬಿ ಮ್ಯಾಥ್ಯು, ವಿಶ್ವವ್ಯಾಪಿಯಾಗಿರುವ ಸ್ಕೌಟ್ಸ್ ಚಳವಳಿಯು ಒಂದು ಯುವ ಜನಾಂಗದ ಕೂಟ. ಈ ಚಳವಳಿಯ ಉದ್ದೇಶವು ಯುವ ಪೀಳಿಗೆಯಲ್ಲಿ ಶಿಸ್ತು- ಸಂಯಮ ಹಾಗೂ ಉತ್ತಮ ನಾಯಕತ್ವ ಗುಣ ಬೆಳೆಸುವುದರೊಂದಿಗೆ ಅವರಲ್ಲಿ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಹೊಂದಲು ಸಹಕರಿಸುವುದೇ ಆಗಿದೆ ಎಂದರು.

ಜಿಲ್ಲೆಯ ಶಾಲೆ, ಕಾಲೇಜುಗಳು ಹಾಗೂ ಸಮುದಾಯದಲ್ಲಿ ಸಾಮಾಜಿಕ ಸೇವಾ ಕಾರ್ಯಗಳ ಜತೆಗೆ ವೈವಿಧ್ಯಮಯ ಕಾರ್ಯಚಟುವಟಿಕೆಗಳನ್ನು ಸ್ಕೌಟ್ಸ್‌ನಿಂದ ಆಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕುಶಾಲನಗರ ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಘಟಕವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕರಿಸಬೇಕು ಎಂದರು.

ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ದೇವರಗುಂಡ ಡಾ.ಪ್ರವೀಣ್ ಸೋಮಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಸೇವಾ ಮನೋಭಾವ ಹಾಗೂ ರಾಷ್ಟ್ರೀಯತೆ ಬೆಳೆಸುವ ಸಮಾಜಮುಖಿ ಚಟುವಟಿಕೆಗಳ ಮೂಲಕ ಚಳವಳಿಯನ್ನು ವಿಸ್ತರಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಂಸ್ಥೆಯ ಜಿಲ್ಲಾ ತರಗತಿ ಆಯುಕ್ತ ಕೆ.ಯು.ರಂಜಿತ್ ಮಾತನಾಡಿದರು.