ಜಿಲ್ಲೆ

ಸಹಕಾರ ಸಂಘಗಳಲ್ಲಿ ಅವ್ಯವಹಾರ: ವಿಶ್ವಾಸಾರ್ಹತೆ ಬಗ್ಗೆ ಚರ್ಚೆ

reportermys

ಮಡಿಕೇರಿ:
ಸಹಕಾರಿ ಕೇತ್ರದಲ್ಲಿ ಕೊಡಗಿಗೆ ದೊಡ್ಡ ಹೆಸರಿದೆ. ಸಹಕಾರಿ ರಂಗದ ಮೂಲಕ ಇಲ್ಲಿ ರಾಜಕೀಯಕ್ಕೆ ಬಂದವರು ಉನ್ನತ ಸ್ಥಾನವನ್ನು ತಲುಪಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಸಹಕಾರ ಕ್ಷೇತ್ರವೂ ಬದಲಾಗುತ್ತಿದೆ. ಕಳೆದ ೭ ವರ್ಷಗಳಲ್ಲಿ ವಿವಿಧ ರೀತಿಯ ಒಟ್ಟು ೧೯ ಸಹಕಾರಿ ಸಂಘಗಳಲ್ಲಿ ದುರುಪಯೋಗ ಪ್ರಕರಣಗಳು ನಡೆದಿರುವುದು ಸಹಕಾರ ಇಲಾಖೆ ಗಮನಕ್ಕೆ ಬಂದಿದೆ. ಕೆಲವೆಡೆ ದುರುಪಯೋಗದ ಮೊತ್ತ ವಸೂಲಾಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ತನಿಖೆ ಪ್ರಗತಿಯಲ್ಲಿ ಇರುವ ಮಾಹಿತಿ ಸಿಕ್ಕಿದೆ.

ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆಯ ೨೮೩ನೇ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರೊಬ್ಬರನ್ನು ಸಿಐಡಿ ಕಳೆದ ವಾರವಷ್ಟೇ ಬಂಧನಕ್ಕೆ ಒಳಪಡಿಸಿತ್ತು. ಈ ಬೆನ್ನಲ್ಲೇ ಸಹಕಾರ ಸಂಘದ ವಿಶ್ವಾಸಾರ್ಹತೆ ಬಗ್ಗೆ ಜನವಲಯದಲ್ಲಿ ಚರ್ಚೆ ಶುರುವಾಗಿದೆ. ಆದರೆ ಕೊಡಗಿನಲ್ಲಿ ಬಹುತೇಕ ಸಹಕಾರ ಸಂಘಗಳು ಸದೃಢವಾಗಿದ್ದು, ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ಮಂಡಳಿಗಳಿಂದಾಗಿ ಸುರಕ್ಷಿತವಾಗಿದೆ ಎನ್ನುತ್ತಾರೆ ಹಿರಿಯ ಸಹಕಾರಿಗಳು. ಈ ಮಧ್ಯೆ ಬೆರಳಣಿಯಷ್ಟು ಸಂಖ್ಯೆಯ ಸಹಕಾರ ಸಂಘಗಳಲ್ಲಿ ನಡೆಯುವ ಅವ್ಯವಹಾರಗಳು ಸಂಪೂರ್ಣ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ.


ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಕಳೆದ ತಿಂಗಳು ವಿಧಾನಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ವಿವಿಧ ಮಾದರಿಯ ಒಟ್ಟು ೩೪೧ ಸಹಕಾರ ಸಂಘಗಳು ಸಹಕಾರ ಇಲಾಖೆಯಲ್ಲಿ ನೋಂದಣಿ ಆಗಿದ್ದು, ೩೦೮ ಸಹಕಾರ ಸಂಘಗಳು ಕಾರ್ಯನಿರತವಾಗಿದೆ. ೨೦೧೫ರ ಏ.೧ರಿಂದ ೨೦೨೨ರ ಮಾರ್ಚ್ ೩೧ರ ತನಕದ ಲೆಕ್ಕಪರಿಶೋಧನೆ ವೇಳೆ ವಿವಿಧ ಮಾದರಿಯ ೧೯ ಸಹಕಾರಿ ಸಂಸ್ಥೆಗಳಲ್ಲಿ ಒಟ್ಟು ೬.೬೦ ಕೋಟಿ ರೂ. ಅವ್ಯವಹಾರ ಆಗಿರುವುದು ಕಂಡುಬಂದಿದೆ.


ವಿರಾಜಪೇಟೆಯ ದಿ ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್, ಚಂಬೆಬಳ್ಳೂರು ಸಹಕಾರಿ ಧವಸ ಭಂಡಾರ, ಗೋಣಿಕೊಪ್ಪ ಎಪಿಸಿಎಂಎಸ್, ಚೆಟ್ಟಳ್ಳಿ ಪ್ಯಾಕ್ಸ್, ಸೋಮವಾರಪೇಟೆ ತಾಲೂಕು ಬಸವನಹಳ್ಳಿಯ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘಗಳಲ್ಲಿ ಈಗಾಗಲೇ ಅವ್ಯವಹಾರದ ಮೊತ್ತ ಸಂಪೂರ್ಣವಾಗಿ ವಸೂಲಿ ಮಾಡಲಾಗಿದೆ. ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿನ ಪ್ರಕರಣದಲ್ಲಿ ಭಾಗಶಃ ಮೊತ್ತ ವಸೂಲಾಗಿದೆ.


ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ, ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಸಹಕಾರ ಸಂಘ, ಸುಂಟಿಕೊಪ್ಪ ಪ್ಯಾಕ್ಸ್‌ನಲ್ಲಿನ ಅವ್ಯವಹಾರ ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಇದ್ದರೆ, ಚಿಕ್ಕ ಅಳುವಾರ ಹಾಕು ಉತ್ಪಾದಕರ ಸಹಕಾರ ಸಂಘದ ದುರುಪಯೋಗ ಪ್ರಕರಣ ಪ್ರಾಥಮಿಕ ವಿಚಾರಣೆಯ ಹಂತದಲ್ಲಿದೆ.
ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಂಬಂಧಿಸಿದ ಪ್ರಕರಣಗಳು ಬೆಂಗಳೂರಿನ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದಲ್ಲಿ ವಿಚಾರಣೆ ಹಂತದಲ್ಲಿ ಇದೆ. ಚೆಯ್ಯಂಡಾಣೆ ಪ್ಯಾಕ್ಸ್ ಮತ್ತು ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಕರಣಗಳನ್ನು ಸಹಕಾರ ಇಲಾಖೆಯ ಕಲಂ ೬೪ರ ವಿಚಾರಣೆಗೆ ಆದೇಶಿಸಲಾಗಿದೆ.


ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತಕ್ಕೆ ಸಂಬಂಧಿಸಿದ ಪ್ರಕರಣ ಅಮಲ್ಜಾರಿ ಕ್ರಮದಲ್ಲಿ ಇರುತ್ತದೆ. ಕೊಡಗು ಗುತ್ತಿಗೆದಾರರ ಸಹಕಾರ ಸಂಘ ಮತ್ತು ಗೋಣಿಕೊಪ್ಪ ಜನಪದ ಪತ್ತಿನ ಸಹಕಾರ ಸಂಘದ ಪ್ರಕರಣದಲ್ಲಿ ಸಿಬ್ಬಂದಿ ವಿರುದ್ಧ ವಸೂಲಾತಿ ಕ್ರಮ ತೆಗೆದುಕೊಳ್ಳಲು ಆಡಳಿತ ಮಂಡಳಿಗೆ ಸೂಚಿಸಲಾಗುತ್ತಿದೆ.


ಸಹಕಾರ ಇಲಾಖೆ ಗಮನಕ್ಕ ಬಂದ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಖಚಿತವಾಗಿದ್ದು, ಇಂತಹ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಕೆಲಸ ಆಗುವುದರಿಂದ ಸಹಕಾರ ಕ್ಷೇತ್ರಗಳ ಮೇಲಿನ ನಂಬಿಕೆ ಉಳಿದುಕೊಳ್ಳುವಂತಾಗಿದೆ ಎನ್ನುತ್ತಾರೆ ಸಹಕಾರಿಗಳು.

ಅವ್ಯವಹಾರದಲ್ಲಿ ಭಾಗಿಯಾಗಿರುವ ಸಂಬಂಧಪಟ್ಟ ಸಹಕಾರ ಸಂಘಗಳ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ವಿರುದ್ಧ ಸಹಕಾರ ಅಧಿನಿಯಮ ೧೯೫೯ ಕಲಂ ೬೯/೭೦ ರಡಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ ಮತ್ತು ಸಂಘದ ಹಂತದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಲಾಗಿರುತ್ತದೆ. ಅವ್ಯವಹಾರ ಸಾಬೀತಾದಲ್ಲಿ ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಕಲಂ ೨೯(ಸಿ) ೮ ರನ್ವಯ ಸಂಘದ ಅಧ್ಯಕ್ಷರು, ನಿರ್ದೇಶಕರುಗಳನ್ನು ಐದು ವರ್ಷಗಳ ಅವಧಿಯವರೆಗೆ ಸಹಕಾರ ಸಂಘದ ಯಾವುದೇ ಪದವಿಯನ್ನು ಹೊಂದದಂತೆ ಅನರ್ಹಗೊಳಿಸಬಹುದು.
ಎಸ್.ಟಿ. ಸೋಮಶೇಖರ್, ಸಹಕಾರ ಸಚಿವ

ಆಡಳಿತ ಮಂಡಳಿ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಇರಬೇಕು. ಸಂಘದ ಸದಸ್ಯರು ಯಾವಾಗಲೂ ಜಾಗೃತರಾಗಿ ಇರಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಮಹಾಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಚರ್ಚೆಗಳಲ್ಲಿ ಪಾಲ್ಗೊಳ್ಳವುದರಿಂದ ಸಹಕಾರ ಸಂಘಗಳಲ್ಲಿ ಅವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.
ಕೆ.ಎಸ್. ಮಹೇಶ್, ಉದ್ಯಮಿ, ಕುಶಾಲನಗರ