ಕೆ.ಆರ್.ನಗರ : ಹೈನುಗಾರಿಕೆ ಭತ್ತದ ನಾಡಿನ ಭಾಗದ ಮಹಿಳೆಯರಿಗೆ ನಿರಂತರ ಆದಾಯ ತಂದುಕೊಡುವ ಲಾಭದಾಯಕ ಉದ್ಯಮವಾಗಿದೆ ಎಂದು ತಾಲೂಕಿನ ಹೊಸಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಗೀತಾಮಂಜುಗೌಡ ತಿಳಿಸಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅತಿ ಶೀಘ್ರದಲ್ಲಿ ಹಾಲು ಶೀತಲೀಕರಣ ಘಟಕ ಮಂಜೂರು ಮಾಡಿಸಿ ಮೇಲ್ದರ್ಜೆಗೇರಿಸಲಾಗುವುದು. ಇದರಿಂದ ಗ್ರಾಮದ ಆರೇಳು ಮಹಿಳೆಯರಿಗೆ ಉದ್ಯೋಗ ಸಿಕ್ಕಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹಾಲು ಒಕ್ಕೂಟದ ಅಧ್ಯಕ್ಷರಿಗೆ ಹಾಗೂ ನಿರ್ದೇಶಕರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ನಮ್ಮ ಸಂಘದಲ್ಲಿ ಈಗಾಗಲೇ 6 ಲಕ್ಷ ರೂ. ಠೇವಣಿ ಇಡಲಾಗಿದೆ. ಸದಸ್ಯರ ಬೇಡಿಯಂತೆ ಪ್ರತಿ ಹದಿನೈದು ದಿನಕ್ಕೊಮ್ಮೆ ಹಾಲು ಸರಬರಾಜು ಮಾಡುವ ಸದಸ್ಯರ ಖಾತೆಗೆ ಬಟವಾಡೆ ಮಾಡಲಾಗುವುದು. ತಾಲೂಕಿನಲ್ಲಿ ಮಾದರಿ ಸಂಘವನ್ನಾಗಿ ಮಾಡಲು ಸದಸ್ಯರ ಸಂಪೂರ್ಣ ಸಹಕಾರ ಬೇಕು. ಮಹಿಳೆಯರ ಸ್ವಾವಲಂಬಿ ಬದುಕಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳು ನೆರವಾಗುತ್ತಿವೆ ಎಂದರು.
ಮೈಮುಲ್ ವಿಸ್ತರಣಾಧಿಕಾರಿ ನೇಮಿನಾಥ್ ಮಾಕಾಣಿ ಮಾತನಾಡಿ, ಮಹಿಳಾ ಸಂಘವು ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಮಾದರಿಯಾಗಿದೆ. 2024-25ನೇ ಸಾಲಿನಲ್ಲಿ ಅಂದಾಜು 95 ಲಕ್ಷ ರೂ. ವ್ಯಾಪಾರ ವಹಿವಾಟು ನಡೆಸಿ 2.45 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ವಾರ್ಷಿಕ ವರದಿ ಓದಿ ಮಂಡಿಸಿದರು.
ಬಂದಿರುವ ಲಾಭಾಂಶದಲ್ಲಿ ಪ್ರತಿ ಮಹಿಳಾ ಸದಸ್ಯರಿಗೂ ದೀಪಾವಳಿ ಹಬ್ಬದಂದು ಬೋನಸ್ ನೀಡಲಾಗುವುದು, ಸದಸ್ಯರು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದಾಗ ಮಾತ್ರ ಸಂಘ ಅಭಿವೃದ್ಧಿ ಹೊದಲು ಸಾದ್ಯ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಎಂಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷೆ ಮೀನಾಕ್ಷಿ, ನಿರ್ಧೆಶಕರಾದ ಶಶಿಕಲಾ, ನಾಗಮ್ಮ, ಮರಿಸಿದ್ದಮ್ಮ, ಶಾಂತಮ್ಮ, ಪ್ರೇಮ, ಕೋಮಲಾಕ್ಷಿ, ಕೋಮಲ, ಮೀನಾಕ್ಷಿ, ಸರೋಜ, ಸಂಘದ ಕಾರ್ಯದರ್ಶಿ ಎ.ಎಚ್.ಮಮತಾ, ಹಾಲು ಪರೀಕ್ಷಕಿ ನಾಗಮಣಿ, ಸಹಾಯಕಿ ಮಂಗಳಾ ಹಾಗೂ ಇನ್ನಿತರರು ಇದ್ದರು.