ಜಿಲ್ಲೆ

ಜೀವನಾವಶ್ಯಕ ವಸ್ತುಗಳ ಬೆಲೆ ನಿಯಂತ್ರಿಸಲಿ

ಅಶೋಕ್ ಕುಮಾರ್ ಎನ್

ಸಿಂಧನೂರು: ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರ ಬ್ಲಾಕ್ ಕಾಂಗ್ರೆಸ್‌ನಿಂದ ಮೆರವಣಿಗೆ ನಡೆಸಲಾಯಿತು. ತಹಸಿಲ್ ಕಚೇರಿಗೆ ತೆರಳಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರ ಏಕಾಏಕಿ ಗೃಹಬಳಕೆಯ ಸಿಲಿಂಡರ್ ದರ 50 ರೂ. ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ 350 ರೂ. ಹೆಚ್ಚಳ ಮಾಡುವ ಮೂಲಕ ಬಡವರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 450 ರಿಂದ 500 ರೂಪಾಯಿಗೆ ಸಿಗುತ್ತಿದ್ದ ಸಿಲಿಂಡರ್ ಇದೀಗ 1153 ರೂ.ಗೆ ತಲುಪಿದೆ.

ಬಿಜೆಪಿ ಸರ್ಕಾರ ಅಚ್ಛೇ ದಿನ್ ಎನ್ನುತ್ತ ಎಲ್ಲ ವಸ್ತುಗಳನ್ನು ದುಬಾರಿ ಮಾಡಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಬೇಕು, ಜೀವನಾವಶ್ಯಕ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತರಬೇಕು ಎಂದು ಒತ್ತಾಯಿಸಲಾಯಿತು.