ಜಿಲ್ಲೆ

ವಿದ್ಯಾರ್ಥಿಗಳು ಸ್ಮರ್ಧಾ ಮನೋಭಾವ ಹೆಚ್ಚಿಸಿಕೊಳ್ಳಲಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರಸ್ತುತ ಪೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ ನೀಡಿದರು.

ನಗರದ ಅಭಿನವ ಭಾರತಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಪ್ರೌಢಶಾಲಾ ಹಂತದಿಂದ ಕಾಲೇಜು ಶಿಕ್ಷಣ ಪಡೆಯಲು ಸನ್ನದ್ದಕೊಳ್ಳುತ್ತಿರುವ ವಿದ್ಯಾರ್ಥಿಗಳು ಇಂದಿನಿಂದಲೇ ಸ್ಪರ್ಧಾತ್ಮಕ ಜಗತ್ತಿಗೆ ದಾಪುಗಾಲು ಇರಿಸಲು ಸಿದ್ಧವಾಗುತ್ತಿದ್ದಾರೆ. ಆದ್ದರಿಂದ ಸ್ಪರ್ಧಾ ಮನೋಭಾವ ಹೆಚ್ಚಿಸಿಕೊಳ್ಳಿ. ಪರಿಣಾಮ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್ಸಿ ಪರೀಕ್ಷೆ ಪ್ರತಿ ವಿದ್ಯಾರ್ಥಿಗೂ ಹೊಸ ತಿರುವು ನೀಡುತ್ತದೆ. ಭಯಬಿಟ್ಟು ಪರೀಕ್ಷೆಗಳನ್ನು ಧೈರ್ಯದಿಂದ ಬರೆಯಿರಿ. ಶ್ರದ್ಧೆ ಮತ್ತು ಸಮಯ ಪ್ರಜ್ಞೆಯಿಂದ ಓದಿದವರು ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ. ಕಡಿಮೆ ಅಂಕ ಪಡೆದರೂ ಮುಂದಿನ ಪರೀಕ್ಷೆಯಲ್ಲಿ ಮತ್ತಷ್ಟು ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತದೆ. ಅನಾಹುತಗಳಿಗೆ ಮನಸ್ಸು ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ಮನುಷ್ಯನಿಗೆ ಶಿಕ್ಷಣ ಮತ್ತು ಜೀವನದ ಪರೀಕ್ಷೆಗಳು ಎದುರಾಗುತ್ತವೆ. ಎರಡನ್ನು ಸಮಯದೊಂದಿಗೆ ಧೃತಿಗೆಡದೆ ಎದುರಿಸಬೇಕು. ಸಾಕಷ್ಟು ಪರೀಕ್ಷೆಗಳು ನಿಮ್ಮನ್ನು ಧೈರ್ಯವಂತರನ್ನಾಗಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅಂತೆಯೇ ಪ್ರತಿಭೆ ಮತ್ತು ಅಂಕ ಪಡೆಯಲು ಜಾತಿ, ಧರ್ಮ, ವರ್ಗ, ಪ್ರದೇಶ ಇರುವುದಿಲ್ಲ. ಪ್ರತಿಭಾವಂತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಎಲ್ಲವೂ ನಿಮ್ಮ ಶ್ರಮದಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಅಭಿನವ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ.ಶಿವಮೂರ್ತಿ ಕೀಲಾರ, ಪ್ರಾಂಶುಪಾಲೆ ಅಂಜಲಿ ಜೋಶಿ ಇತರರಿದ್ದರು.