ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್  
ಜಿಲ್ಲೆ

ಮತದಾರರಿಗೆ ಗ್ಯಾರಂಟಿಗಳ ಮನವರಿಕೆ: ಎನ್.ರಮೇಶ್

ಶಿವಮೊಗ್ಗ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿಗಳು ಎಲ್ಲ ಜನರನ್ನೂ ತಲುಪಿದ್ದು, ಮತದಾರರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ತಿಳಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅತ್ಯಧಿಕ ಮತಗಳಿಂದ ಗೆಲ್ಲುವುದು ನೂರಕ್ಕೆ ನೂರು ಸತ್ಯ. ಪಕ್ಷದ ಗೆಲುವಿಗೆ ಜಿಲ್ಲಾ ಕಾಂಗ್ರೆಸ್ ಸಂಘಟನಾತ್ಮಕ ತಂತ್ರ ಹೆಣೆದಿದ್ದು, ಮತದಾರರಿಗೆ ಗ್ಯಾರಂಟಿಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರದಲ್ಲಿ ಇಂಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಕೃಷಿಯನ್ನು ಜಿಎಸ್‌ಟಿಯಿಂದ ಹೊರತರುವುದು, ಬೆಳೆವಿಮೆ, ಯುವಕರಿಗೆ ಅಪ್ರೆಂಟೀಸ್, ದೇಶದ ಎಲ್ಲ ಬಡವರ್ಗದ ಮಹಿಳೆಯರಿಗೆ ಪ್ರತಿವರ್ಷ 1 ಲಕ್ಷ ರೂ. ನೀಡುವುದು, ಸರ್ಕಾರಿ ನೇಮಕಾತಿಯಲ್ಲಿ ಶೇ.50ರಷ್ಟು ಮಹಿಳೆಯಿರಿಗೆ ಮೀಸಲಾತಿ, ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಳ, ದುಡಿಯುವ ಮಹಿಳೆಯರಿಗೆ ಸಾವಿತ್ರಿಬಾಯಿ ಫುಲೆ ಹಾಸ್ಟೆಲ್ ಸೌಲಭ್ಯ ಸೇರಿ ಜನೋಪಯೋಗಿ ಕಾರ್ಯಕ್ರಮಗಳ ಹತ್ತು ಗ್ಯಾರಂಟಿಗಳನ್ನು ರಾಷ್ಟ್ರಮಟ್ಟದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಭರವಸೆ ಕೊಟ್ಟಿದ್ದಾರೆ. ಈ ಬಗ್ಗೆಯೂ ಮತದಾರಿಗೆ ಮನವರಿಕೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಎಚ್.ಎಂ.ಮಧು, ಮಂಜುನಾಥಬಾಬು, ಶಿವಾನಂದ, ಎಲ್.ಸತ್ಯನಾರಾಯಣ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.