ಕಾರವಾರ: ದೃದಯ ಕಾಯಿಲೆ ಇರುವ ಸ್ವಂತ ಮಗಳನ್ನೇ ವಿಷ ಕುಡಿಸಿ ಕೊಂದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಯಲ್ಲಾಪುರದ ಹೆಮ್ಮಾಡಿಯ ನಾಗರಾಜ ನಾರಾಯಣ ಪೂಜಾರಿ ಮಗಳನ್ನು ಕೊಂದ ಅಪರಾಽ. ಆತನಿಗೆ ಜೈಲಿನ ಜತೆ 17 ಸಾವಿರ ರೂ ದಂಡ ವಿಧಿಸಿದ್ದು, 10 ಸಾವಿರ ರೂ.ಗಳನ್ನು ಮೃತಳ ತಂಗಿ ಸಹನಾ ನಾಗರಾಜ ಪೂಜಾರಿ ಈತಳಿಗೆ ಪರಿಹಾರವಾಗಿ ನೀಡಬೇಕು ಎಂದು 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ಕಿರಣ ಕಿಣಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ ಎಂ.ಮಳಗೀಕರ್ ವಾದ ಮಂಡಿಸಿದ್ದರು.
ಕುಟುಂಬ ದುರಂತ ಅಂತ್ಯ:
14 ವರ್ಷಗಳ ಹಿಂದೆ ನಾಗರಾಜ ಪೂಜಾರಿ ಮಂಗಲಾ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಹೆಣ್ಣು ಮಕ್ಕಳಾದರು ಎಂಬ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡ ನಾಗರಾಜ ಪೂಜಾರಿ ಪತ್ನಿಯ ಮೇಲೆ ಕುಪಿತನಾಗಿದ್ದ. ಸದಾ ಕಾಲ ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ. ಈ ನಡುವೆ ಮಗಳು ನಯನಾಳಿಗೆ ಹೃದಯ ಸಮಸ್ಯೆ ಕಾಣಿಣಿಸಿಕೊಂಡಿತ್ತು. ಆಕೆಯ ದೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಮಗಳಿಂದ ಸಾಕಷ್ಟು ಖರ್ಚಾಯಿತು ತನ್ನ ದುಡಿಮೆಯೆಲ್ಲ ಆಕೆಯ ಚಿಕಿತ್ಸೆಗೇ ಹೋಗುತ್ತದೆ ಎಂದು ನಾರಾಯಣ ಪೂಜಾರಿ ಇನ್ನಷ್ಟು ಕುಪಿತನಾಗಿದ್ದ. ಮನೆಯಲ್ಲಿ ಗಲಾಟೆ ಮಾಡುತ್ತಿದ್ದ.
ಗಂಡನ ಕಾಟ ತಾಳಲಾರದ ಪತ್ನಿ ಮಂಗಲಾ 2018 ರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಗಂಡನ ಜತೆಗೇ ಬಿಟ್ಟು ಕಾರವಾರಕ್ಕೆ ಬಂದು ವಾಸ್ತವ್ಯ ಹೂಡಿದ್ದಳು. 2019 ರ ಜನವರಿ 4 ರಂದು ಕಾರವಾರದ ಕರುಣಾ ಮಹಿಳಾ ಸಾಂತ್ವನ ಕೇಂದ್ರದ ಸದಸ್ಯರು ದಂಪತಿ ಹಾಗೂ ಮಕ್ಕಳನ್ನು ಕರೆಸಿ ಮಾತುಕತೆ ನಡೆಸಿದ್ದರು. ಇಬ್ಬರೂ ಒಂದುಗೂಡಿಸಲು ಪ್ರಯತ್ನಿಸಿದ್ದರು. ಒಪ್ಪದ ಕಾರಣ ಸಾಂತ್ವನ ಕೇಂದ್ರದ ಕೌನ್ಸೆಲರ್ ಅವರು `ನೀವು ಯಾರ ಜತೆಗೆ ಇರಲು ಇಚ್ಛೆಪಡುತ್ತೀರಿ..?' ಎಂದು ಮಕ್ಕಳ ಬಳಿ ವಿಚಾರಿಸಿದ್ದರು. ಆದರೆ, ಮಕ್ಕಳು ಏನನ್ನೂ ಮಾತನಾಡದೇ ಕುಳಿತಿದ್ದರು.
ತಾನು ಮಕ್ಕಳನ್ನು ಸುಖವಾಗಿ ನೋಡಿಕೊಂಡರೂ ತನ್ನ ಜತೆ ಇರುತ್ತೇನೆ ಎಂದು ಮಕ್ಕಳು ಬಾಯಿ ಬಿಡದ ಕಾರಣ ಸಿಟ್ಟಿಗೆದ್ದ ತಂದೆ ನಾರಾಯಣ ಪೂಜಾರಿ ಮನೆಗೆ ಹೋಗಿ ಇಬ್ಬರೂ ಮಕ್ಕಳಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದ. ಜ.5 ರಂದು ಮಗಳು ನಯನಾಳಿಗೆ ಕೀಟನಾಶಕ ಕುಡಿಸಿದ್ದ. ಆಕೆ ವಾಂತಿ ಮಾಡಿದಾಗ ಆಕೆಗೆ ವಿಷ ಕುಡಿಸಿರುವುದು ಗೊತ್ತಾಗಬಾರದು ಎಂದು ಅವೆಲ್ಲವನ್ನೂ ಒರೆಸಿ, ಸಾಕ್ಷ್ಯ ನಾಶ ಮಾಡಿದ್ದ. ಆತನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಲ್ಲಾಪುರ ಇನ್ಸ್ಪೆಕ್ಟರ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.