ಮಂಗಳೂರು: ಯೆಯ್ಯಡಿ ಜಂಕ್ಷನ್‌ನಲ್ಲಿ ಸ್ಕೂಟರ್ ಗೆ ಢಿಕ್ಕಿ ಹೊಡೆದು ಸಹ ಸವಾರ ಮೃತಪಟ್ಟ ಪ್ರಕರಣದಲ್ಲಿ ಸ್ಥಳದಿಂದ ಪರಾರಿಯಾಗಿದ್ದ ಓಮ್ನಿ ಕಾರು ಚಾಲಕನಿಗೆ ಮಂಗಳೂರಿನ 8ನೇ ಜೆಎಂಎಫ್ ಸಿ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬಜಪೆ ಸಿದ್ಧಾರ್ಥ ನಗರದ ಸತೀಶ್ ಶಿಕ್ಷೆಗೊಳಗಾದ ಅಪರಾಧಿ.
ಯೆಯ್ಯಡಿ ಜಂಕ್ಷನ್ ನಲ್ಲಿ 2023ರ ಎ.25ರಂದು ಘಟನೆ ನಡೆದಿತ್ತು. ಬಾರೆಬೈಲ್ ಒಳರಸ್ತೆಯಿಂದ ತೆರೆದ ಡಿವೈಡರ್ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಸತೀಶ್ ಚಲಾಯಿಸುತ್ತಿದ್ದ ಓಮ್ನಿ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಹಿಂಬದಿ ಸವಾರನಾಗಿದ್ದ ಸೋಮಲಿಂಗ ಎಂಬವರು ಕಾರಿನ ಮುಂಭಾಗದ ಗಾಜಿಗೆ ಎಸೆಯಲ್ಪಟ್ಟು ರಸ್ತೆಯ ಮಧ್ಯದ ಡಿವೈಡರ್ ನಲ್ಲಿ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಮೃತಪಟ್ಟಿದ್ದರು. ಈ ವೇಳೆ ಸತೀಶ್ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಕೂಟರ್ ಚಲಾಯಿಸುತ್ತಿದ್ದ ಚೇತನ್ ನಾಯ್ಕ ಅವರೂ ಸಾಮಾನ್ಯ ಸ್ವರೂಪದ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ತನಿಖೆ ನಡೆಸಿದ ಅಂದಿನ ಕದ್ರಿ ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆಯನ್ನು ಕೈಗೆತ್ತಿಕೊಂಡ 8ನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್ ಪಿ.ಎ. ಅವರು ಸಾಕ್ಷಿ ವಿಚಾರಣೆ ನಡೆಸಿ ವಾದ ಪ್ರತಿವಾದಗಳನ್ನು ಆಲಿಸಿ, ಕಾರು ಚಾಲಕ ಗಾಯಾಳುಗಳಿಗೆ ಯಾವುದೇ ವೈದ್ಯಕೀಯ ನೆರವು ನೀಡದೆ ಸ್ಥಳದಿಂದ ಪರಾರಿಯಾಗಿರುವುದು ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ.
ಚಾಲಕನಿಗೆ ಐಎಂವಿ ಕಾಯ್ದೆ ಕಲಂ 187 ಅಡಿಯಲ್ಲಿ 1 ತಿಂಗಳ ಸಾದಾ ಸಜೆ ಮತ್ತು 5,000 ರೂ ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ತಪ್ಪಿದಲ್ಲಿ 10 ದಿನಗಳ ಸಾದಾ ಸಜೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ನೀಡಿರುತ್ತಾರೆ. ಸರ್ಕಾರದ ಪರವಾಗಿ ಆರೋನ್ ಡಿಸೋಜ ವಿಟ್ಲ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.