ಜಿಲ್ಲೆ

‘ಕಾಸಿನಸರ’ ಮೌಲ್ಯಯುತ ಸಂದೇಶ ಸಾರಲಿದೆ

Chitradurga

ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿ ಕೌಟುಂಬಿಕ ಕಲಹ ಹೆಚ್ಚುತ್ತಿದೆ. ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಜನರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಮೌಲ್ಯಯುತ ಸಂದೇಶ ಸಾರಲು ‘ಕಾಸಿನಸರ’ ಸಿನಿಮಾ ನಿರ್ಮಾಣವಾಗಿದೆ ಎಂದು ನಟ ವಿಜಯ ರಾಘವೇಂದ್ರ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿನಿಮಾ ಸೇರಿ ಯಾವ ಕ್ಷೇತ್ರದಿಂದಲೂ ಸಮಸ್ಯೆ ಸೃಷ್ಟಿಯಾಗಬಾರದು. ಪರಿಹರಿಸುವ ಕೆಲಸವಾಗಬೇಕು, ಉತ್ತಮ ಸಮಾಜ ನಿರ್ಮಿಸಬೇಕು. ಆ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಇದಾಗಿದ್ದು, ಈ ಸಿನಿಮಾ ನೋಡುಗರಿಗೆ ಸಂತೋಷ ನೀಡುವುದರ ಜತೆಗೆ ಬದಲಾವಣೆಗೂ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನಟಿ ಹರ್ಷಿಕಾ ಪೂಣಚ್ಚಾ ಮಾತನಾಡಿ, ಅನ್ನದಾತರೂ ನೋಡಬೇಕಾದ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ನಟಿಸಿರುವುದು ನನಗೆ ಸಿಕ್ಕ ಉತ್ತಮ ಅವಕಾಶ ಎಂದು ಭಾವಿಸಿದ್ದೇನೆ ಎಂದರು.

ನಿರ್ದೇಶಕ ನಂಜುಂಡೇಗೌಡ ಮಾತನಾಡಿ, ಕಾಸಿನಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಈ ಚಿತ್ರದಲ್ಲಿ ಅದನ್ನು ಕೃಷಿ ಭೂಮಿಗೆ ಹೋಲಿಸಲಾಗಿದೆ. ರಾಜ್ಯದ 100 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಚಿತ್ರದ ಸಂಭಾಷಣೆಕಾರ, ಕವಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಈ ಚಿತ್ರದಲ್ಲಿ ಕಾಸಿನಸರವೆಂದರೆ ಆಭರಣವಲ್ಲ, ಭೂಮಿಗೆ ಇರುವ ಜೀವ ಸರಪಳಿಯಾಗಿದೆ ಎಂದು ಹೇಳಿದರು.

ಕೃಷಿ ಜೀವನ ಭೂಮಿಯ ಜೈವಿಕ ಸತ್ವಕ್ಕೆ ಪೂರಕವಾಗಿರಬೇಕು. ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಕೃಷಿಯ ಕೊಡುಗೆಯೂ ಇದೆ. ವ್ಯವಸಾಯದ ಮೂಲ ತಳಿಗಳು ಕಾಣೆಯಾಗುತ್ತಿವೆ ಎಂದು ತಿಳಿಸಿದರು.

ಕಲಾವಿದರಾದ ನೀನಾಸಂ ಅಶ್ವಥ್, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ, ರೈತ ಸಂಘದ ಮುಖಂಡ ನುಲೇನೂರು ಶಂಕರಪ್ಪ ಇತರರಿದ್ದರು.

*ಹಳ್ಳಿಯ ಚಿತ್ರಣ ಅನಾವರಣ

ಗ್ರಾಮೀಣ ಬದುಕಿನ ನೈಜ ಅನಾವರಣವೇ ಕಾಸಿನಸರ ಚಿತ್ರದ ಮೂಲ ಕಥೆ. ಇಲ್ಲಿ ಕೃಷಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದ್ದು, ಅದರಿಂದ ವಿಮುಖರಾಗದಂತೆ ಸಂದೇಶವೊಂದನ್ನು ನೀಡಲಾಗಿದೆ. ನಗರೀಕರಣ ಮತ್ತು ಕೈಗಾರೀಕರಣ ಫಲವತ್ತಾದ ಭೂಮಿಯನ್ನು ಹಾಳು ಮಾಡುತ್ತಿದೆ. ರಸಗೊಬ್ಬರ ಬಳಕೆ ಅಪಾಯ ತಂದೊಡ್ಡುತ್ತಿದೆ. ಜನರಿಗೆ ವಿಷಾಹಾರ ನೀಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಜವಾಬ್ದಾರಿಯೊಂದಿಗೆ ಸಿನಿಮಾ ಕಥೆ ಸಾಗಲಿದೆ ಎಂದು ನಿರ್ಮಾಪಕ ಈ.ದೊಡ್ಡನಾಗಯ್ಯ ತಿಳಿಸಿದರು.