ಮೈಸೂರು: ದಕ್ಷಿಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರಬೆಟ್ಟಕ್ಕೆ ಇರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿ ಅಭಿವೃದ್ಧಿಪಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದರು.
ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಹಾಗಾಗಿ ಕೊಳ್ಳೇಗಾಲ ಮತ್ತು ಮಹದೇಶ್ವರ ಬೆಟ್ಟದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿ ಅಭಿವೃದ್ಧಿಪಡಿಸಬೇಕು. ಇದರಿಂದ ಭಕ್ತರಿಗೆ ಅನುಕೂಲವಾಗುತ್ತದೆ ಎಂದರು.
ಮೈಸೂರು-ಬೆಂಗಳೂರು ರಸ್ತೆ ಸೇರಿದಂತೆ ಕರ್ನಾಟಕದಲ್ಲಿ 10 ಸಾವಿರ ಕಿ.ಮೀ.ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ.ಯುಪಿಎ -2ರಲ್ಲಿ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಮತ್ತು ಎನ್‌ಡಿಎ ಸರ್ಕಾರದ ಸಚಿವರಾಗಿರುವ ನಿತಿನ್‌ಗಡ್ಕರಿ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಬೇಕು ಎಂದರು.
ಆಸ್ಕರ್ ಫರ್ನಾಂಡೀಸ್ ಸಚಿವರಾಗಿದ್ದಾಗ ಮೈಸೂರು-ಬೆಂಗಳೂರು ನಡುವಿನ ರಸ್ತೆಯನ್ನು ಮೇಲ್ದರ್ಜೇಗೇರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪವನ್ನು ಸಲ್ಲಿಸಲಾಗಿತ್ತು. ನಂತರ ವರದಿಯ ಆಧಾರದ ಮೇಲೆ ಎನ್‌ಎಚ್ ಮೇಲ್ದರ್ಜೇಗೇರಿಸುವುದಕ್ಕೆ ಘೋಷಣೆ ಮಾಡಲಾಯಿತು. ನಂತರ ಬಂದ ಎನ್‌ಡಿಎ ಸರ್ಕಾರ ಅನುಮೋದನೆ ನೀಡಿತು ಎಂದರು.
2013ರಲ್ಲಿ ರಾಜ್ಯದಲ್ಲಿ 4482 ಕಿ.ಮೀ ರಾಷ್ಟ್ರೀಯ ಹೆದ್ದಾರಿ ರಸ್ತೆ ಇತ್ತು. ನಂತರ, 1882 ಕಿ.ಮೀ. ರಸ್ತೆಯನ್ನು ಮೇಲ್ದರ್ಜೇಗೇರಿಸಲಾಯಿತು. ಮತ್ತೆ ಬೀದರ್‌ನಿಂದ ಚಾಮರಾಜನಗರದ ವರೆಗಿನ ರಸ್ತೆ ಸೇರಿದಂತೆ 2ಸಾವಿರ ಕಿ.ಮೀ ರಸ್ತೆಯನ್ನುಎನ್‌ಎಚ್ ಆಗಿ ಪರಿವರ್ತಿಸಲಾಗಿದೆ. ಅದಕ್ಕೆ ಬೇಕಾದ ಮೂಲಸೌಕರ್ಯವನ್ನು ನಮ್ಮ ಸರ್ಕಾರ ಇದ್ದಾಗ ಒದಗಿಸಿದೆ ಎಂದು ಹೇಳಿದರು.