ಜಿಲ್ಲೆ

ಮತಾಂತರಕ್ಕೆ ಅವಕಾಶ ನೀಡುವುದಿಲ್ಲ

Davangere - Desk - Mahesh Babu E

ಹಿರಿಯೂರು: ಪವಿತ್ರವಾದ ದಕ್ಷಿಣ ಕಾಶಿಯ ನೆಲದ ಈಶ್ವರನ ಸನ್ನಿಧಿಯಲ್ಲಿ ಯಾವುದೇ ಒಬ್ಬ ಹಿಂದುವನ್ನು ಮತಾಂತರ ಮಾಡಲು ಬಿಡುವುದಿಲ್ಲ ಎಂದು ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಆಸಾಂತಡ್ಕ ಹೇಳಿದರು.

ನಗರದಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳ ಸೋಮವಾರ ಏರ್ಪಡಿಸಿದ್ದ ಹಿಂದು ಮಹಾಗಣಪತಿ ಶೋಭಾಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದುತ್ವ ಎಂಬುದು ಕೇವಲ ಡಿಜೆ ಹಾಡಿನ ನೃತ್ಯಕ್ಕೆ ಸೀಮಿತವಾಗಬಾರದು. ವರ್ಷದ 365 ದಿನ ನಮ್ಮ ಹೃದಯದಲ್ಲಿ ನೆಲೆಸಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಹಳ್ಳಿ, ಗಲ್ಲಿಗಳಲ್ಲಿ ಹಿಂದುತ್ವ ಸಂಸ್ಕಾರದ ಸಂದೇಶ ಸಾರಬೇಕು. ಆ ರೀತಿ ಚಟುವಟಿಕೆಗಳು ಚುರುಕುಗೊಳ್ಳಬೇಕು ಎಂದರು.

ಹಿಂದುತ್ವ ಎಂದರೆ ಶಕ್ತಿ, ಇದನ್ನು ಉಳಿಸಿಕೊಂಡು ರಾಮರಾಜ್ಯ ಕಟ್ಟೋಣ, ನಾವ್ಯಾರೂ ದೇವರನ್ನು ಪ್ರತ್ಯಕ್ಷವಾಗಿ ನೋಡಿಲ್ಲ. ಆದರೆ, ಹಿಂದು ಸಮಾಜ ಅತ್ಯಂತ ಶ್ರೇಷ್ಠ ಸಮಾಜವಾಗಿದ್ದು, ನಂಬಿಕೆ, ಆಧಾರದ ಮೇಲೆ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಗಣೇಶೋತ್ಸವ ಹಿಂದು ಸಂಕೇತ ಹಬ್ಬವಾಗಿದೆ ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಶೋಭಾಯಾತ್ರೆ ತಡರಾತ್ರಿಯವರೆಗೆ ನಡೆಯಿತು. ಡಿಜೆ ಸದ್ದಿಗೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು. ಉಡುವಳ್ಳಿ ಕೆರೆಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬಜರಂಗದಳದ ಜಿಲ್ಲಾ ಸಂಚಾಲಕ ಶ್ರೀನಿವಾಸ್ ಮಸ್ಕಲ್, ಗೋವರ್ಧನ್, ಯೋಗೇಶ್, ವೆಂಕಟೇಶ್, ಅಮರ್, ಪ್ರವೀಣ್ ಇತರರು ಭಾಗವಹಿಸಿದ್ದರು.