ಮಂಡ್ಯ: ಮಹಾತ್ಮ ಗಾಂಧೀಜಿ ಅವರ ಸ್ವರಾಜ್ಯದ ಕಲ್ಪನೆಯಂತೆ ರೈತರು ಹಾಗೂ ಬಡ ಜನರಿಗೆ ಆರ್ಥಿಕ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪೂರಕ ಹೆಜ್ಜೆಯನ್ನಿಟ್ಟಿದ್ದಾರೆ. ಅದರಂತೆ ಸೆ.13ರಂದು ಪಾಂಡವಪುರ ಪಟ್ಟಣದಲ್ಲಿ ‘ಸ್ವರಾಜ್ ಉತ್ಸವ’ ಆಯೋಜಿಸಲಾಗಿದೆ. ಗ್ರಾಮಗಳನ್ನು ಸ್ವಾವಲಂಬಿ ಮಾಡುವುದು ಹಾಗೂ ನಾಗರಿಕರನ್ನು ಶಕ್ತಿವಂತರನ್ನಾಗಿ ಮಾಡುವ ಗುರಿಯೊಂದಿಗೆ 30ಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ಅನುಭವ, ಪ್ರಯೋಗ ಹಾಗೂ ಮಾದರಿಯನ್ನು ಉತ್ಸವದಲ್ಲಿ ಹಂಚಿಕೊಳ್ಳಲಿವೆ. ಕೃಷಿ, ಆಹಾರ ವ್ಯವಸ್ಥೆ, ಶಿಕ್ಷಣ, ಮಹಿಳಾ ಸಬಲೀಕರಣ, ತ್ಯಾಜ್ಯ ನಿರ್ವಹಣೆ, ಆರೋಗ್ಯ, ಲಿಂಗ ಸಮಾನತೆ ಸೇರಿದಂತೆ ಹಲವು ಕ್ಷೇತ್ರದ ಬಗ್ಗೆ ಸಮರ್ಪಕ ಮಾಹಿತಿ ನೀಡಲಾಗುತ್ತಿದೆ. ಜನರ ಸಮಸ್ಯೆಗಳನ್ನು ಆಲಿಸಲು ಯಾವುದೇ ಅರ್ಜಿ ಇಲ್ಲದೆ, ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರಿಂದ ಸಮಸ್ಯೆಗಳ ಪಡೆದು ಅದನ್ನು ನೇರವಾಗಿ ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಿ ಸಮಸ್ಯೆ ಬಗೆಹರಿಸುವ ವಿನೂತನ ಕಾರ್ಯಕ್ರಮದ ಜತೆಗೆ ಮತ್ತೊಂದು ಹೆಜ್ಜೆ ಇಟ್ಟಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಮುಂದಾಗಿದ್ದಾರೆ. ಸ್ವರಾಜ್ಯ ಉತ್ಸವದ ಬಗ್ಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಮ್ಮ ಹಳ್ಳಿ ನಮ್ಮ ಹೆಮ್ಮೆ, ನಮ್ಮ ಬದುಕು ಸ್ವರಾಜ್ಯ ಗ್ರಾಮದೆಡೆಗೆ ಎಂಬ ಘೋಷಣೆಯಡಿ 13ರಂದು ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ‘ಸ್ವರಾಜ್ ಉತ್ಸವ ಹಮ್ಮಿಕೊಳ್ಳಲಾಗಿದೆ. ಮಹಾತ್ಮ ಗಾಂಧೀಜಿ ಅವರ ಸ್ವರಾಜ್ಯ ಚಳವಳಿಯಂತೆ ಈ ಉತ್ಸವ ನಡೆಯಲಿದೆ ಎಂದು ತಿಳಿಸಿದರು. ಚುನಾವಣಾ ಪ್ರಚಾರ ಸಮಯದಲ್ಲಿ ಹಳ್ಳಿಗಳಿಗೆ ಭೇಟಿ ನೀಡಿದಾಗ ಸಾಕಷ್ಟು ಸಮಸ್ಯೆಗಳು ಕೇಳಿ ಬಂದವು. ಆ ಹಿನ್ನೆಲೆಯಲ್ಲಿ ಪುಟ್ಟಣ್ಣಯ್ಯ ೌಂಡೇಷನ್ ಹಾಗೂ ರೈತ ಸಂಘದ ವತಿಯಿಂದ ಹಳ್ಳಿಗಳ ಪ್ರಗತಿ, ಸಮಗ್ರ ಬೆಳವಣಿಗೆಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಉತ್ಸವದಲ್ಲಿ 11 ವಿಷಯಗಳ ಕುರಿತು ಪ್ರದರ್ಶನ, ಸಂವಾದ, ಪ್ರಾತ್ಯಕ್ಷಿಕೆ ಹಾಗೂ ನೇರ ಚಟುವಟಿಕೆ ನಡೆಯಲಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸರ್ಕಾರೇತರ ಸಂಸ್ಥೆಗಳು ಭಾಗವಹಿಸಲಿವೆ. ಕ್ಷೇತ್ರಾದ್ಯಂತ 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು. ಸ್ವರಾಜ್ ಉತ್ಸವದಲ್ಲಿ ಕೃಷಿ, ಆರೋಗ್ಯ, ಆರ್ಥಿಕ ಸ್ವಾವಲಂಬನೆ, ಯುವಜನ ಅಭಿವೃದ್ಧಿ, ತಂತ್ರಜ್ಞಾನ, ಉದ್ಯಮಶೀಲತೆ, ಶಿಕ್ಷಣ, ಪ್ರವಾಸೋದ್ಯಮ ಮುಂತಾದ ವಿಷಯಗಳ ಕುರಿತು ಯುವಕ-ಯುವತಿಯರಿಗೆ, ಸಾರ್ವಜನಿಕರಿಗೆ ಮಾಹಿತಿ, ಜಾಗೃತಿ, ಪ್ರದರ್ಶನ, ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಜನರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದು ಕೇವಲ ಉತ್ಸವಕ್ಕೆ ಸೀಮಿತವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಹೋಬಳಿ, ಗ್ರಾಮ, ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಮೂಲಕ ರೈತರು ಹಾಗೂ ಜನರ ಬದುಕು ರೂಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು. ಮೇಲುಕೋಟೆ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಸೌಂದರ್ಯ ಉಳಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಉತ್ತೇಜಿಸಲಾಗುವುದು. ರೈತರು ಹಾಗೂ ಬಡ ಜನರಿಗೆ ಆರ್ಥಿಕ ಬದುಕು ಕಟ್ಟಿಕೊಡುವ ಉದ್ದೇಶವಿದೆ. ಹಳ್ಳಿಯ ಭಾಗದ ಜನರನ್ನು ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಡುವ ಬಗ್ಗೆ ಆಲೋಚನೆ ಇದೆ. ಜನರ ಸಮಸ್ಯೆಗಳಿಗೆ ಪರಿಹಾರ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಹೊಸ ಶಾಲೆಗಳ ನಿರ್ಮಾಣ ಮಾಡಿ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಆರೋಗ್ಯದ ಬಗ್ಗೆ ಸಮಸ್ಯೆ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿ ಗ್ರಾಪಂನಲ್ಲೂ ಜನ ಸಂಪರ್ಕ ಸಭೆ ನಡೆಸಿ ಅರ್ಜಿ ಸ್ವೀಕರಿಸಿದರೂ ಸಹ ಯಾವುದೇ ಕೆಲಸ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂನಲ್ಲಿ ಇದ್ದು ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತಿದೆ. ರೈತರು ಬೆಳೆಯುವ ಬೆಳೆ ಬದಲಾವಣೆ ಮಾಡಿಕೊಂಡು, ಮಣ್ಣಿನ ಫಲವತ್ತತೆ ಕುಸಿತ ಪರಿಹಾರ ಕಂಡುಕೊಳ್ಳಬೇಕು. ರೈತರು ಆರ್ಥಿಕವಾಗಿ ಸದೃಢವಾಗಬೇಕು. ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು. ಆಡಳಿತ ವ್ಯವಸ್ಥೆ, ಸಮಾನತೆ, ಶೈಕ್ಷಣಿಕ, ಕೃಷಿ, ಯುವಜನತೆ, ಉದ್ಯಮಶೀಲತೆ, ಉದ್ಯೋಗ ಸೃಷ್ಟಿ ಈ ಎಲ್ಲ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಸ್ಥಳೀಯವಾಗಿ ತರಬೇತಿ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ, ಪ್ರವಾಸೋದ್ಯಮ ಬೆಳೆಸುವ ಬಗ್ಗೆ, ಪರಿಸರ ಉಳಿಸುವ ಬಗ್ಗೆ ಮಾಹಿತಿ ನೀಡಲು 30ಕ್ಕೂ ಹೆಚ್ಚು ಸಂಸ್ಥೆಗಳು ಸ್ವರಾಜ್ ಉತ್ಸವದಲ್ಲಿ ಭಾಗಿಯಾಗಲಿವೆ. ಜನರ ಬಳಿಯಿಂದಲೇ ಮಾಹಿತಿ ಪಡೆದು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಇದಕ್ಕೆ ಕ್ಷೇತ್ರದ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಭಾರತದ ಆತ್ಮ ಹಳ್ಳಿಗಳು. ನಮ್ಮ ಹಳ್ಳಿಗಳ ಜನರು ಅವರ ಜೀವನ ಮಟ್ಟವನ್ನು ಎಲ್ಲ ಆಯಾಮದಲ್ಲಿ ಸುಧಾರಿಸಲು ಮತ್ತು ಅವರ ಜೀವನವನ್ನು ಸ್ವಾವಲಂಬಿಯಾಗಿ ಕಟ್ಟಿಕೊಳ್ಳಲು ಸಮರ್ಥರನ್ನಾಗಿ ಮಾಡಲು ಹೊರಟಿರುವ ದಿಟ್ಟ ಕ್ರಾಂತಿ ಈ ಸ್ವರಾಜ್ ಉತ್ಸವ. ಗಾಂಧೀಜಿ ಪರಿಕಲ್ಪನೆಯಂತೆ ಸ್ವಾಭಿಮಾನ ಸ್ವಾವಲಂಬನೆ ಶಕ್ತಿಯಿಂದ ಅಭಿವೃದ್ಧಿಯ ಜೀವನ ಸಾಧಿಸುವುದು ನಿಜವಾದ ಸ್ವರಾಜ್ಯ. ಸಾಮೂಹಿಕವಾಗಿ ಜನರ ಉತ್ತಮ ಜೀವನ ನಿರ್ವಹಣೆಗಾಗಿ ನಡೆಯುತ್ತಿರುವ ಈ ಉತ್ಸವವು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ನಿವಾರಿಸಿ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದಾಗಿದೆ. ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಶಾಸಕ