raichur 
ಜಿಲ್ಲೆ

ವಿದ್ಯಾರ್ಥಿನಿಯರೊಂದಿಗೆ ಸಂವಾದ *ಮಹಿಳೆಯರು ಸ್ವಾತಂತ್ರ್ಯವಾಗಿ ಆಲೋಚನೆ ಮಾಡಬೇಕು- ಡಾ.ನಾಗಲಕ್ಷ್ಮೀ ಚೌಧರಿ

 ರಾಯಚೂರು ಶಿಕ್ಷಣ ಬೇರೂರಲಿಲ್ಲ. ಬಡತನ ಕಡಿಮೆಯಾಗಲಿಲ್ಲ, ಬಾಲ್ಯವಿವಾಹಗಳು, ಬಾಲ್ಯ ಗರ್ಭಿಣೀಯರು ಹೆಚ್ಚಾಗಿ ಕಂಡುಬರುತ್ತವೆ ಎಂಬ ಕಾರಣಕ್ಕೆ ಕಲ್ಯಾಣ ಕರ್ನಾಟಕವನ್ನು ಅತ್ಯಂತ ಹಿಂದುಳಿದ ಭಾಗವೆಂದು ಹೇಳಲಾಗುತ್ತಿದೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು.

ನಗರದ ಎಸ್‌ಎಸ್‌ಆರ್‌ಜಿ ಮಹಿಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ,ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣುಮಕ್ಕಳು ಕೇವಲ ಮನೆಗೆಲಸ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಮಾತ್ರ ಸೀಮಿತವಲ್ಲ. ಇದರ ಜತೆಗೆ ಸ್ವಾತಂತ್ರ್ಯವಾಗಿ ಆಲೋಚನೆ ಮಾಡುವಂತೆ ಹಾಗೂ ಸ್ವಾತಂತ್ರ್ಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಓದುವುದರಿಂದ ವ್ಯತ್ಯಾಸವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಅದರಲ್ಲೂ ಮಹಿಳೆಯರು ಪ್ರಗತಿ ಸಾಧಿಸಬೇಕು. ಮೊಬೈಲ್‌ನಿಂದ ದೂರ ಇದ್ದಾಗ ನೂರಕ್ಕೆ ನೂರರಷ್ಟು ಗುರಿಯನ್ನು ಸಾಧಿಸಬಹುದಾಗಿದೆ. ಮೊಬೈಲ್ ಎಂಬುವುದು ಎಲ್ಲರನ್ನು ಹಿಡಿದುಕೊಂಡಿದೆ. ಕೆಟ್ಟ ಅಭ್ಯಾಸಗಳು ಬೇಗ ಕಲಿಯಬಹುದಾಗಿದ್ದು, ಒಳ್ಳೆಯ ಅಭ್ಯಾಸಗಳು ಕಲಿಯಲು ಕಷ್ಟ ಆದರೆ ಒಳ್ಳೆಯ ಅಭ್ಯಾಸಗಳು ಶಾಶ್ವತವಾಗಿ ಕೈ ಹಿಡಿಯುತ್ತವೆ. ಕೆಟ್ಟ ಅಭ್ಯಾಸಗಳು ನಮ್ಮನ್ನು ಶಾಶ್ವತವಾಗಿ ನಾಶ ಮಾಡುತ್ತವೆ ಆದ್ದರಿಂದ ಎಲ್ಲಾ ಹೆಣ್ಣುಮಕ್ಕಳು ಉತ್ತಮವಾಗಿ ಅಭ್ಯಾಸ ಮಾಡಿ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು.

ನಂತರ ಕಾಲೇಜಿನ ವಿದ್ಯಾರ್ಥಿಯರು ಮಹಿಳಾ ಆಯೋಗದ ಕುರಿತು ಸಂವಾದ ಮೂಲಕ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ವಿಜಯಲಕ್ಷ್ಮೀ, ಗಿರಿಜಾ, ಸಂಜಯ್ ಪವಾರ್, ಈರಮ್ಮ, ಗುಂಜಳ್ಳಿ, ಮಂಜುಳಾ, ಪ್ರತಿಭಾ ರೆಡ್ಡಿ, ಶ್ರೀದೇವಿ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಕುಮಾರ ಸೇರಿದಂತೆ ಅನೇಕರು ಇದ್ದರು.