ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಕೆ.ವಿ.ಶಂಕರಗೌಡ ಪ್ಲೇಸ್‌ಮೆಂಟ್ ಮತ್ತು ಟ್ರೈನಿಂಗ್ ಆಡಿಟೋರಿಯಂನಲ್ಲಿ ಡಿ.29ರಂದು ಭಾರತೀಯ ವಾಯುಪಡೆಯ ಏರ್‌ವೈಸ್ ಮಾರ್ಷಲ್ ಕೆ.ಎನ್.ಸಂತೋಷ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಆಯೋಜಿಸಲಾಗಿದೆ ಎಂದು ಕಾಲೇಜಿನ ಉಪಪ್ರಾಂಶುಪಾಲ ಡಾ.ಎಸ್.ವಿನಯ್ ತಿಳಿಸಿದರು.
ಅಂದು ಬೆಳಗ್ಗೆ 10.30ಕ್ಕೆ ಸಂವಾದ ಪ್ರಾರಂಭವಾಗಲಿದೆ. ಬಳಿಕ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರ ಅಧ್ಯಕ್ಷತೆಯಲ್ಲಿ ಕೆ.ಎನ್.ಸಂತೋಷ್ ಅಭಿನಂದನೆ ನಡೆಯಲಿದೆ. ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಭಾಗವಹಿಸಲಿದ್ದಾರೆ. ಸಂವಾದದಲ್ಲಿ ಉದ್ಯೋಗಾವಕಾಶದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೆ.ಎನ್.ಸಂತೋಷ್ ಅವರು ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ 1988ರಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಏರ್‌ವೈಸ್‌ನಲ್ಲಿ ವಿವಿಧ ಡೊಮೇನ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಐಎಎಫ್‌ನಲ್ಲಿ ವ್ಯಾಪಕ ಶ್ರೇಣಿಯ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಏವಿಯಾನಿಕ್ಸ್ ಸಾಪ್ಟ್‌ವೇರ್ ತಜ್ಞರಾಗಿ ರಷ್ಯಾದಲ್ಲಿ ಪ್ರಾಜೆಕ್ಟ್ ತಂಡದ ಭಾಗವಾಗಿದ್ದರು. ಅಂತೆಯೇ ಪಶ್ಚಿಮ ವಲಯದ ಕಣ್ಗಾವಲು ಘಟಕ ಮತ್ತು ಎಐಆರ್ ಎಚ್‌ಕ್ಯೂನಲ್ಲಿ ನಿರ್ದೇಶಕ ಯೋಜನೆಗಳ ಮೊದಲ ಪದಾಧಿಕಾರಿಯಾಗಿದ್ದರು. ಮಾತ್ರವಲ್ಲದೆ ಎಎಫ್‌ಎಸ್ ಜೋಧ್‌ಪುರದಲ್ಲಿ ಮುಖ್ಯ ಇಂಜಿನಿಯರ್, ಎಸ್‌ಡಿಎ ಮತ್ತು ಎಎಫ್‌ನಲ್ಲಿ ಮುಖ್ಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರ ಕೊಡುಗೆ ಪರಿಗಣಿಸಿ 2005ರಲ್ಲಿ ರಾಷ್ಟ್ರಪತಿಯವರು ವಿಶೇಷ ಸೇವಾ ಪದಕ ನೀಡಿದ್ದಾರೆ. ಜತೆಗೆ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ 2017ರಲ್ಲಿ ಡಾ.ವಿ.ಎಂ.ಘಾಟ್ಗೆ ಪ್ರಶಸ್ತಿ ಲಭಿಸಿದೆ.
ಕಾಲೇಜಿನ ಸಿಎಸ್ ಆ್ಯಂಡ್ ಇ ವಿಭಾಗದ ಮುಖ್ಯಸ್ಥೆ ಡಾ.ನಾಗರತ್ನ, ಎಸ್‌ಡಬ್ಲುಒ ವೇಣುಗೋಪಾಲ್ ಇದ್ದರು.