ಜಿಲ್ಲೆ

ಸಾಹಿತ್ಯೇತರರಿಗೆ 87ನೇ ನುಡಿಜಾತ್ರೆ ಅಧ್ಯಕ್ಷತೆ ಬೇಡ: ಕಸಾಪ ಮಾಜಿ ಪ್ರೊ.ಎಚ್.ಎಸ್.ಮುದ್ದೇಗೌಡ ಸ್ಪಷ್ಟನುಡಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತ್ಯೇತರರನ್ನು ಆಯ್ಕೆ ಮಾಡುವುದಕ್ಕೆ ನನ್ನ ತೀವ್ರ ವಿರೋಧವಿದೆ. ಈ ಬಗ್ಗೆ ಈಗಾಗಲೇ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಜತೆಗೆ ಸಾಹಿತ್ಯೇತರರಿಗೆ ಅಧ್ಯಕ್ಷತೆ ಕೊಡುವ ಮೂಲಕ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಂಪರೆಗೆ ಭಂಗ ತರುವ ಕೆಲಸ ಬೇಡ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರೂ ಆದ ಸಮ್ಮೇಳನದ ಪುಸ್ತಕ ಸಮಿತಿ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ಸಲಹೆ ನೀಡಿದರು.
ನುಡಿಜಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಆಯೋಜಿಸಿದ್ದ ವಾರದ ಸಂವಾದದಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಸಾಹಿತಿಗಳಲ್ಲದವರು ಸಮ್ಮೇಳನಾಧ್ಯಕ್ಷರಾಗುವುದು ಅಕ್ಷಮ್ಯ. ಜತೆಗೆ ಅದು ಔಚಿತ್ಯವೂ ಅಲ್ಲ. ಸಮ್ಮೇಳನಾಧ್ಯಕ್ಷರಾಗಲು ಮಠಾಧೀಶರು, ರಾಜಕಾರಣಿ, ಸಾಹಿತಿಗಳಲ್ಲದವರು ದುಂಬಾಲು ಬಿದ್ದಿರುವುದು ಸರಿಯಲ್ಲ. ಇದಕ್ಕೆ ನನ್ನ ತೀವ್ರ ವಿರೋಧವಿದೆ. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಏನೆಂಬುದನ್ನು ಮೊದಲು ಅವರು ಅರ್ಥಮಾಡಿಕೊಳ್ಳುವುದು ಸೂಕ್ತ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಅವರು ಮಠಾಧೀಶರು, ಸಾಹಿತಿಗಳಲ್ಲದವರು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲು ದುಂಬಾಲು ಬಿದ್ದಿದ್ದಾರೆ ಎಂದು ಹೇಳಿರುವುದಕ್ಕೆ ಈಗಾಗಲೇ ಟೀಕೆ-ಟಿಪ್ಪಣಿಗಳು ಕೇಳಿಬರುತ್ತಿವೆ. ಈ ಬಗ್ಗೆ ಅಧ್ಯಕ್ಷರು ಯೋಚಿಸಿ ತೀರ್ಮಾನಿಸಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ 1915ರಲ್ಲಿ ಆರಂಭವಾದಾಗಿನಿಂದ ಅಧ್ಯಕ್ಷತೆಯನ್ನು ಸಾಹಿತಿಗಳಿಗೆ ನೀಡಲಾಗುತಿದೆ. ಅಂದಿನಿಂದಲೂ ಸಾಹಿತಿಗಳೇ ಪರಿಷತ್‌ನ್ನು ನಡೆಸಿಕೊಂಡು ಬರುತ್ತಿದ್ದಾರೆ. ಯಾರನ್ನು ಆಯ್ಕೆ ಮಾಡಬೇಕೆನ್ನುವುದು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನವಾಗಲಿದೆ ಎಂದು ತಿಳಿಸಿದರು.
ಇನ್ನು ಹೊರ ಜಿಲ್ಲೆಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದಕ್ಕಿಂತ ಮಂಡ್ಯ ಜಿಲ್ಲೆಯವರನ್ನೇ ಆಯ್ಕೆ ಮಾಡುವುದು ಸೂಕ್ತ. ಅದರಲ್ಲೂ ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಒಳಿತು. ಮಂಡ್ಯ ಜಿಲ್ಲೆಯವರೇ ಆದ ಹಿರಿಯ ಸಾಹಿತಿ ಡಾ.ಲತಾ ರಾಜಶೇಖರ್ ಅವರನ್ನು ನೇಮಕ ಮಾಡುವುದು ಸೂಕ್ತ ಎನಿಸುತ್ತದೆ. ಈ ಸಂಬಂಧ ಮಹೇಶ ಜೋಶಿ ಅವರಿಗೆ ನನ್ನ ಅಭಿಪ್ರಾಯ ನೀಡಿದ್ದೇನೆ ಎಂದರು.
ಹೊರವಲಯವೇ ಸೂಕ್ತ: ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಮ್ಮೇಳನವನ್ನು ಬಹಳ ವಿಶಿಷ್ಟವಾಗಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಎಲ್ಲ ಕಾರ್ಯಕ್ರಮಗಳು ಒಂದೇ ಸ್ಥಳದಲ್ಲಿ ನಡೆಯಬೇಕೆಂಬುದು ಎಲ್ಲರ ಅಭಿಪ್ರಾಯ. ಇದಕ್ಕಾಗಿ 100 ಎಕರೆ ಜಾಗ ಬೇಕಾಗಿದ್ದು, ನಗರದ ಹೊರವಲಯದ ಅಮರಾವತಿ ಹೋಟೆಲ್ ಸಮೀಪ ಗುರುತಿಸಿರುವ ಸ್ಥಳ ಸೂಕ್ತವಾಗಿದೆ ಎಂದು ಪ್ರೊ.ಎಚ್.ಎಸ್.ಮುದ್ದೇಗೌಡ ಹೇಳಿದರು.
ಒಂದೇ ಸ್ಥಳದಲ್ಲಿ 100 ವಿವಿಧ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ, ವಿಚಾರ ಗೋಷ್ಠಿ, ವೇದಿಕೆ ಕಾರ್ಯಕ್ರಮಗಳು ನಡೆಯುವುದರಿಂದ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ತಮಗೆ ಇಷ್ಟಬಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ. ಸಮ್ಮೇಳನಕ್ಕೆ ಸಾಹಿತಿಗಳು, ಆಸಕ್ತರು ಬರುವುದು ಸೂಕ್ತ. ಅದನ್ನು ಬಿಟ್ಟು ಹಳ್ಳಿ ಹಳ್ಳಿಗಳಿಗೆ ಬಸ್ ಕಳುಹಿಸಿ ಜನರನ್ನು ಕರೆಸುವುದು ಸೂಕ್ತವಲ್ಲ. ಹೊರ ಜಿಲ್ಲೆಗಳಿಂದ ಬರುವ ಸಾಹಿತ್ಯಾಸಕ್ತರಿಗೆ ಸಾರಿಗೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಂ, ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷ ಕೆ.ಎನ್.ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ ಇದ್ದರು.

ಪುಸ್ತಕ ಬರೆಯುವವರಿಗೆ ಅವಕಾಶ
ನುಡಿಜಾತ್ರೆ ಅಂಗವಾಗಿ 87 ಪುಸ್ತಕಗಳನ್ನು ಹೊರತರಲು ತೀರ್ಮಾಸಲಾಗಿದೆ. ಅದರಂತೆ ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ 38 ಪುಸ್ತಕಗಳನ್ನು ಹೊರತರಲು ಅವಕಾಶ ನೀಡಲಾಗಿದೆ. ಆದರೆ, ಇದುವರೆಗೂ 27 ಜನರು ಪುಸ್ತಕಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಸಾಹಿತಿಗಳಿದ್ದು, ಪುಸ್ತಕ ಬರೆಯಲು ಬಹಳ ಸೋಮಾರಿಗಳಾಗಿದ್ದಾರೆ ಎಂದು ಪುಸ್ತಕ ಸಮಿತಿ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ಬೇಸರ ವ್ಯಕ್ತಪಡಿಸಿದರು.
ನಮಗೆ ನೀಡಿರುವ ಅವಕಾಶದಂತೆ ಇನ್ನೂ 17 ಪುಸ್ತಕಗಳು ಬೇಕಾಗಿದೆ. ಆದ್ದರಿಂದ 15 ದಿನ ಕಾಲಾವಕಾಶ ನೀಡಲಾಗುವುದು. ಯುವ ಸಾಹಿತಿಗಳು ಜಿಲ್ಲೆಗೆ ಸಂಬಂಧಿಸಿದ ರಾಜಕೀಯ, ಸಾಮಾಜಿಕ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳ ಬಗ್ಗೆ 80 ರಿಂದ 90 ಪುಟಗಳಲ್ಲಿ ಬರೆದು ತಮಗೆ ಕಳುಹಿಸಬಹುದು ಎಂದು ಮಾಹಿತಿ ನೀಡಿದರು.