ಜಿಲ್ಲೆ

ಶಸ್ತ್ರಚಿಕಿತ್ಸೆಯಿಂದ ಕ್ಯಾನ್ಸರ್ ನಿಯಂತ್ರಿಸಲು ಸಾಧ್ಯ: ತಜ್ಞ ವೈದ್ಯ ಡಾ.ಲೋಕೇಶ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಂಡಾಶಯ ಮತ್ತು ದೊಡ್ಡ ಕರುಳಿನ ಮಾರಕ ಕ್ಯಾನ್ಸರ್‌ಗಳನ್ನು ನಿಯಂತ್ರಿಸುವ ಶಸ್ತ್ರ ಚಿಕಿತ್ಸೆ ಮೈಸೂರಿನ ನಾರಾಯಣ ಹೆಲ್ತ್ ಸೆಂಟರ್‌ನಲ್ಲಿ ಲಭ್ಯವಿದೆ ಎಂದು ತಜ್ಞ ವೈದ್ಯ ಡಾ.ಲೋಕೇಶ್ ತಿಳಿಸಿದರು.

ಕ್ಯಾನ್ಸರ್ ದಿನದ ಅಂಗವಾಗಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸಂವಾದದಲ್ಲಿ ಮಾತನಾಡಿದ ಅವರು, ಅತ್ಯಾಧುನಿಕ ಹೈಫೆಕ್(ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೊಥೆರಪಿ) ಶಸ್ತ್ರ ಚಿಕಿತ್ಸೆಯಿಂದ ಕ್ಯಾನ್ಸರ್ ರೋಗಿಗಳು ಹೆಚ್ಚು ಕಾಲ ಬದುಕುಳಿಯುವಂತೆ ಮಾಡಬಹುದು. ಅಂಡಾಶಯ ಕ್ಯಾನ್ಸರ್ ಕಾಯಿಲೆಗೆ ನಿಖರ ಕಾರಣ ಕಂಡುಬಂದಿಲ್ಲ. ತಾಂತ್ರಿಕತೆಯ ಉನ್ನತೀಕರಣದಿಂದ ಉತ್ತಮ ಚಿಕಿತ್ಸೆ ಸ್ಥಳೀಯವಾಗಿ ದೊರೆಯುವುದರಿಂದ ರೋಗಿಗಳ ಆರ್ಥಿಕ ವೆಚ್ಚ ಹಾಗೂ ಪ್ರಯಾಣದ ಅವಧಿ ಕಡಿತವಾಗಲಿದೆ ಎಂದರು.

ಶಸ್ತ್ರಚಿಕಿತ್ಸಕ ಡಾ.ಸುಹಾಸ್ ಮಾತನಾಡಿ, ಆಹಾರ ಪದ್ಧತಿಯ ಬದಲಾವಣೆ, ಕಲುಷಿತ ಹಾಗೂ ರಸಾಯನಿಕಯುಕ್ತ ಆಹಾರ ಬಳಕೆ, ಬದಲಾದ ಜೀವನ ಪದ್ಧತಿ, ಬೊಜ್ಜುತನದ ಹೆಚ್ಚಳ, ಕಡಿಮೆ ಶ್ರಮದಾನ ಹಾಗೂ ಜಂಕ್‌ಫುಡ್‌ಗಳ ಬಳಕೆಯಿಂದಲೂ ಕ್ಯಾನ್ಸರ್ ಕಾಯಿಲೆ ಗೋಚರಿಸಲಿದ್ದು, ನಿಗಾ ವಹಿಸುವ ಅಗತ್ಯತೆ ಇದೆ. ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುವ ಹೈಫೆಕ್ ಶಸ್ತ್ರ ಚಿಕಿತ್ಸೆಯಲ್ಲಿ ಕಿಬ್ಬೊಟ್ಟೆಯಲ್ಲಿರುವ ಕ್ಯಾನ್ಸರ್ ಕಣಗಳನ್ನು ಹೆಚ್ಚಿನ ತಾಪಮಾನದ ಮೂಲಕ ಔಷಧ ಪೂರೈಕೆ ಮತ್ತು ಕ್ಯಾನ್ಸರ್ ಕೋಶಗಳ ಸೂಕ್ಷ್ಮತೆಯನ್ನು ನಿಯಂತ್ರಿಸಬಹುದಾಗಿದೆ ಎಂದರು.

8ರಿಂದ 12 ಗಂಟೆಗಳ ಕಾಲದ ದೀರ್ಘಾವಧಿಯ ಶಸ್ತ್ರಚಿಕಿತ್ಸೆಗೆ ಸುಮಾರು 5 ಲಕ್ಷ ರೂ ಖರ್ಚಾಗಲಿದೆ. ಆಸ್ಪತ್ರೆಯ ಸಿಎಸ್‌ಆರ್ ನಿಧಿ ಮೂಲಕ ಕಡು ಬಡವರಿಗೆ 1 ಲಕ್ಷ ರೂ ಆರ್ಥಿಕ ನೆರವು, ಇತರೆ ರೋಗಿಗಳಿಗೆ ಬಡ್ಡಿರಹಿತ ಸಾಲವಾಗಿ ಹಣಕಾಸು ನೆರವು ಕೊಡಿಸುವ ಯೋಜನೆಯೂ ಲಭ್ಯವಿದೆ. ಮೂರನೇ ಹಂತದ ಕ್ಯಾನ್ಸರ್ ರೋಗಿಗಳಿಗೂ ಶಸ್ತ್ರ ಚಿಕಿತ್ಸೆ ಲಭ್ಯವಿದೆ ಎಂದರು.

ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ಸೋಮನಾಥ್ ಇದ್ದರು.