ಜಿಲ್ಲೆ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗರು ಹೀಗೆ ಮಾಡ್ತಾರೆ:-ಸಚಿವ ಮಂಕಾಳ ವೈದ್ಯ ಎಚ್ಚರಿಕೆ

Uttara Kannada - Subash Hegde

ಕಾರವಾರ: ಮತ್ತೆ ಚುನಾವಣೆ ಬರ್ತಿದೆ. ಬಿಜೆಪಿಯವರು ಹೊಸ ಸುಳ್ಳು ಹೇಳಲು, ನಿಮ್ಮ ನೆಮ್ಮದಿಯನ್ನು ಹಾಳು ಮಾಡಲು ಸಜ್ಜಾಗುತ್ತಿದ್ದಾರೆ. ನೀವು ಅದನ್ನು ನಂಬಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಜಿಲ್ಲೆಯ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.
ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಆಯೋಜಿಸಿದ್ದ 5 ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮನ್ನು ಗೆಲ್ಲಿಸಿದ ಜನರನ್ನು ಸುಖವಾಗಿಡುವುದೇ ಅಭಿವೃದ್ಧಿ ಎಂದು ತಿಳಿದು ಕೆಲಸ ಮಾಡುತ್ತಿದ್ದೇವೆ. ಸರ್ಕಾರ ರಚನೆಯಾದ 6 ತಿಂಗಳಲ್ಲಿ ಜಿಲ್ಲೆಯಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳಿಗೆ 1 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ. ವರ್ಷಕ್ಕೆ 2 ಸಾವಿರ ಕೋಟಿ ರೂ. ಜಿಲ್ಲೆಗೆ ಬೇಕಾಗಿದ್ದು, ಅದನ್ನೂ ನೀಡಲು ಸಿದ್ಧರಿದ್ದೇವೆ.
ವಿವಿಧ ಗ್ಯಾರಂಟಿಗಳು ಜಿಲ್ಲೆಯ ಶೇ. 90 ರಷ್ಟು ಜನರಿಗೆ ತಲುಪಿವೆ. ಆದರೂ ನಮಗೆ ಸಮಾಧಾನವಿಲ್ಲ. ಬಾಕಿ ಉಳಿದ ಶೇ.10 ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ತಲುಪಿಸಲು ನಾವು ಜಿಲ್ಲಾ , ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಗಳನ್ನು ರಚಿಸಿದ್ದೇವೆ. ಮನೆ, ಮನೆ ಸಮೀಕ್ಷೆ ಕೈಗೊಂಡಿದ್ದೇವೆ. ಶೇ.100 ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಪ್ರಯೋಜನ ತಲುಪಿಸುವುದು ನಮ್ಮ ಗುರಿ ಎಂದರು.
ನಮ್ಮ ಜಿಲ್ಲೆಯಲ್ಲಿ 4.39 ಲಕ್ಷ ತಾಯಂದಿರು ಶಕ್ತಿ ಯೋಜನೆಯಡಿ ಇದುವರೆಗೆ ಉಚಿತವಾಗಿ ಬಸ್‌ನಲ್ಲಿ ಓಡಾಡಿದ್ದು, ಅದರ ಟಿಕೆಟ್ ಮೊತ್ತ 126 ಕೋಟಿ ರೂ.ಗಳಾಗಲಿವೆ. ಗೃಹ ಜ್ಯೋತಿ ಯೋಜನೆಯಲ್ಲಿ ಶೇ.100 ರಷ್ಟು ಸಾಧನೆಯಾಗಿದ್ದು, 3.78 ಲಕ್ಷ ಕುಟುಂಬಗಳು ಶೂನ್ಯ ಕರೆಂಟ್ ಬಿಲ್ ಪಡೆಯುತ್ತಿವೆ. ಅದರ ಮೊತ್ತ 115.59 ಕೋಟಿ ರೂ.ಗಳಾಗಿವೆ. ಜಿಲ್ಲೆಯ 2.81 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ ಕುಟುಂಬಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ತಲಾ 5 ಕೆಜಿ ಅಕ್ಕಿಯ ಮೊತ್ತ 112.04 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುತ್ತಿದೆ. ಗೃಹ ಲಕ್ಷ್ಮೀ ಯೋಜನೆಯಡಿ 3.14 ಲಕ್ಷ ಯಜಮಾನಿಯರ ಬ್ಯಾಂಕ್ ಖಾತೆಗಳಿಗೆ ಮಾಸಿಕ 2 ಸಾವಿರ ರೂ.ನಂತೆ ಇದುವರೆಗೆ ಮಾಸಿಕ 350.14 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಲೆಕ್ಕ ನೀಡಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ದೇವರಾಜ ಅರಸು ಅವರು ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದರು. ಬಂಗಾರಪ್ಪ ಅವರು ರೈತರಿಗೆ ಪಂಪ್‌ಸೆಟ್ ನೀಡಿ ನೆರವಾದರು. ಸಿದ್ದರಾಮಯ್ಯ ಅವರ ಐದು ಗ್ಯಾರಂಟಿ ಯೋಜನೆ ಇಡೀ ದೇಶದಲ್ಲೇ ಮಾದರಿಯಾಗಿದೆ. ಬಡ, ಮಧ್ಯಮ ವರ್ಗದ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.


ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಸತೀಶ ಸತೀಶ ನಾಯ್ಕ, ವಿವಿಧ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು. ಕಾಂಗ್ರೆಸ್ ನಾಯಕರು ವೇದಿಕೆಯ ಮೇಲಿದ್ದರು. ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಸ್ವಾಗತಿಸಿದರು. ಜಿಪಂ ಸಿಇಒ ಈಶ್ವರ ಕಾಂದೂ, ಎಸ್‌ಪಿ ಎನ್.ವಿಷ್ಣುವರ್ಧನ ಇದ್ದರು.

ವಿವಿಧ ಸ್ಟಾಲ್
ಜಿಲ್ಲೆಯ ವಿವಿಧ ತಾಲೂಕುಗಳಿಂದ 220 ಬಸ್‌ಗಳಲ್ಲಿ ಜನರನ್ನು ಕರೆತರಲಾಗಿತ್ತು. ಆಗಮಿಸಿದ ಎಲ್ಲರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಫಲಾನುಭವಿಗಳನ್ನು ಕರೆತರುವ ಜವಾಬ್ದಾರಿಯನ್ನು ಆಯಾ ಗ್ರಾಪಂ
ಪಿಡಿಒಗಳಿಗೆ ಫಲಾನುಭವಿಗಳನ್ನು ಕರೆತರುವ ಜವಾಬ್ದಾರಿ ವಹಿಸಲಾಗಿತ್ತು.


ಗ್ಯಾರಂಟಿ ಹಾಡಿಗೆ ದನಿಯಾದ ಸೈಲ್
ಗ್ಯಾರಂಟಿ ಯೋಜನೆ ಕುರಿತು ಅಮದಳ್ಳಿ ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಗೌಡ ರಚಿಸಿದ ಹಾಡನ್ನು ಶಾಸಕ ಸತೀಶ ಸೈಲ್ ಹಾಡಿ ಗಮನ ಸೆಳೆದರು. ಸಚಿವ ಮಂಕಾಳ ವೈದ್ಯ, ಶಾಸಕ ಭೀಮಣ್ಣ ನಾಯ್ಕ ಕೂಡ ಜತೆಯಾದರು. ಬಂಟದೇವ ಯುವಕ ಸಂಘದ ಸದಸ್ಯರು ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದರು.

ಸೈಲ್‌ ಹಾಡಿದ ಹಾಡನ್ನು ಇಲ್ಲಿ ವೀಕ್ಷಿಸಿ: https://www.facebook.com/100063883459774/posts/pfbid02bNqvB8zMzNA5P42Ldj1NuRX8j2AUSLNmcmwozyCPHzjHLJoYTtQwNy8L2ro1oe3Jl/?mibextid=VhDh1V
………