ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಜ್ ನಲ್ಲಿರುವ ಕನಕ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. 
ಜಿಲ್ಲೆ

ಜಾತಿ ಸಮಾವೇಶ ಬೇಡ ಎಂದು ಹೇಳಿದವರಿಂದ ಸಮಾವೇಶ

ರಾಚಯ್ಯ ಸ್ವಾಮಿ

ರಾಯಚೂರು: ಜಾತಿವಾರು ಸಮಾವೇಶ ಮಾಡಬೇಡಿ ಎಂದವರೇ ಇಂದು ಜಾತಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಶೋಷಿತರು, ಹಿಂದುಳಿದವರು ಸಂಘಟನೆಗಾಗಿ ಸಮಾವೇಶ ಮಾಡಿದರೆ ಅದಕ್ಕೂ ಜಾತಿ ಸಮಾವೇಶದ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ತಿಂಥಿಣಿ ಬ್ರಿಡ್ಜ್‌ನಲ್ಲಿನ ಕನಕ ಗುರುಪೀಠದಲ್ಲಿ ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದುಳಿದವರು, ಶೋಷಿತರು ಇಂದು ಶಿಕ್ಷಣ, ಸಂಘಟನೆ, ಹೋರಾಟದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.
ಶಿಕ್ಷಣ, ಅವಕಾಶ ಸಿಕ್ಕವರು ಮೇಲ್ಜಾತಿಯವರಾದರು. ವಿದ್ಯೆ, ಅವಕಾಶ ವಂಚಿತರು ಶೂದ್ರರಾದರು. ಜಾತಿ ವ್ಯವಸ್ಥೆಯನ್ನು ದೇವರು ಮಾಡಿಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜಾತಿಗಳನ್ನು ಮಾಡಿದ್ದಾರೆ. ಚಾತುವರ್ಣ ಹೆಸರಿನಲ್ಲಿ ಸಮಾಜವನ್ನು ವಿಂಗಡಣೆ ಮಾಡುವ ಕೆಲಸವನ್ನು ಮೇಲ್ಜಾತಿಯವರು ಮಾಡಿದ್ದಾರೆ. ಇಂದಿಗೂ ಅದರ ಲಾಭ ಪಡೆಯುವ ಪ್ರಯತ್ನ ಮುಂದುವರಿಸಿದ್ದಾರೆ.
ಶಿಕ್ಷಣದಿಂದ ಮಾತ್ರ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತದೆ. ಕಾರಣ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು. ನಾವು ಏನಿದ್ದೇವೆ, ಮುಂದೇನಾಗಬೇಕು ಎನ್ನುವ ಬಗ್ಗೆ ಇಂತಹ ಸಮಾವೇಶಗಳ ಮೂಲಕ ಚರ್ಚೆ ಮಾಡಬೇಕು.
ದೇಶದ ಆಸ್ತಿ 143 ಕೋಟಿ ಜನರ ಆಸ್ತಿಯಾಗಿದೆ. ಕಾಯಕ, ದಾಸೋಹದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಮಾಜದಲ್ಲಿ ಕುಳಿತು ತಿನ್ನುವವರು, ಕೆಲಸ ಮಾಡದವರು ದರ್ಬಾರ್ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಶೋಷಿತರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಕೆಲವರು ಗ್ಯಾರಂಟಿಗಳ ಬಗ್ಗೆ ಮಾಡುವ ಟೀಕೆಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖವಾಗಿವೆ. ಯುವಜನರದಲ್ಲಿ ಆದರ್ಶಗಳು ಕಡಿಮೆಯಾಗುತ್ತಿದ್ದು, ಯುವಜನರಿಗೆ ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡಬೇಕಾಗಿದೆ ಎಂದರು
ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಹಾಲುಮತ ಭಾಸ್ಕರ, ಕನಕ ರತ್ನ, ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಭೈರತಿ ಸುರೇಶ, ಎನ್.ಎಸ್.ಬೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಬಸನಗೌಡ ತುರ್ವಿಹಾಳ, ರಾಘವೇಂದ್ರ ಹಿಟ್ನಾಳ, ಎಂಎಲ್ಸಿಗಳಾದ ಎಚ್.ವಿಶ್ವನಾಥ, ಶರಣಗೌಡ ಬಯ್ಯಪುರ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಪುರ, ಡಿ.ಎಸ್.ಹುಲಗೇರಿ, ರಾಜಾ ರಾಯಪ್ಪ ನಾಯಕ ಉಪಸ್ಥಿತರಿದ್ದರು.