ಗುಳೇದಗುಡ್ಡದಲ್ಲಿ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೂಮಿಪೂಜೆ ನೆರವೇರಿಸಿದರು. 
ಜಿಲ್ಲೆ

ಗರ್ಭಿಣಿಯರಿಗೆ ಚಿಕಿತ್ಸೆ ಪಡೆಯಲು ಅನುಕೂಲ

ಗುಳೇದಗುಡ್ಡ: ತಾಯಂದಿರನ್ನು ಗೌರವಿಸಬೇಕಾದದ್ದು ನಮ್ಮ ಸಂಸ್ಕೃತಿ. ಅಂತಹ ತಾಯಂದಿರು ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಗಳ ಅನನುಕೂಲದಿಂದಾಗಿ ಬೇರೆ ಊರುಗಳಿಗೆ ಚಿಕಿತ್ಸೆಗಾಗಿ ಹೋಗಬಾರದೆಂದು ಪಟ್ಟಣದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಸಂಜೆ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಯಿ ಮತ್ತು ಮಗುವಿನ ಆರೈಕೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುತ್ತಿದೆ.

ಅನುಭವಿ ವೈದ್ಯರು ಇಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಈ ಆಸ್ಪತ್ರೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಜಮೀರ ಮೌಲ್ವಿ, ವೈ.ಆರ್. ಹೆಬ್ಬಳ್ಳಿ, ರಾಜು ತಾಪಡಿಯಾ, ಮಲ್ಲೇಶಪ್ಪ ಬೆಣ್ಣಿ, ವಿನೋದ ಮದ್ದಾನಿ, ಲೆಂಕೆಪ್ಪ ಹಿರೇಕುರುಬರ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ, ಡಾ. ಅನಿಲ ಉಕ್ಕಲಿ, ಇಂಜಿನಿಯರ್ ಡಿ.ಜೆ.ರಾಠೋಡ, ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ, ರಮೇಶ ಪದಕಿ, ಪುರಸಭೆ ಮಾಜಿ ಅಧ್ಯಕ್ಷೆ ಯಲ್ಲವ್ವ ಗೌಡರ, ಶಿಲ್ಪಾ ಹಳ್ಳಿ, ಅಮರೇಶ ಕವಡಿಮಟ್ಟಿ, ಸಂತೋಷ ನಾಯನೇಗಲಿ, ಬಸವರಾಜ ಬಂಡಿವಡ್ಡರ ಇದ್ದರು.