ಜಿಲ್ಲೆ

13 ಗಂಟೆ ಬಳಿಕ ಆಸ್ಪತ್ರೆಗೆ ಸೋಂಕಿತ

  • ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
    ಕರೊನಾ ಸೋಂಕು ದೃಢಪಟ್ಟಿರುವ ಮಾಹಿತಿ ನೀಡಿದ 13 ಗಂಟೆ ಬಳಿಕ ಸ್ವಯಂ ಸೇವಕರೊಬ್ಬರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿರುವುದು ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ವಿದ್ಯಮಾನದಿಂದ ಜಿಲ್ಲಾಡಳಿತ ಇರಿಸುಮುರಿಸು ಅನುಭವಿಸುವಂತಾಗಿದೆ.
    ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಮೇಕೇರಿ ಮೂಲದ ಹಿಂದು ಜಾಗರಣಾ ವೇದಿಕೆಯ ಸ್ವಯಂಸೇವಕ ಶುಕ್ರವಾರ ಮಧ್ಯಾಹ್ನ ಕೋವಿಡ್ ಆಸ್ಪತ್ರೆಗೆ ತೆರಳಿ ಗಂಟಲು ದ್ರವ ನೀಡಿದ್ದರು. ಶನಿವಾರ ಮಧ್ಯಾಹ್ನದ ಮೇಲೆ ಮೊಬೈಲ್ ಸೈಲೆಂಟ್‌ನಲ್ಲಿಟ್ಟು ನಿದ್ರೆಗೆ ಜಾರಿದ್ದರು. ಸಂಜೆ 5 ಗಂಟೆಗೆ ಎಚ್ಚರಗೊಂಡಾಗ ಮೊಬೈಲ್‌ನಲ್ಲಿ 17 ಮಿಸ್ಡ್ ಕಾಲ್ ಇತ್ತು. ದಿನೇಶ್‌ಕುಮಾರ್ ಹೆಸರಿನಲ್ಲಿರುವ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದಾಗ, ಸೋಂಕು ದೃಢಪಟ್ಟಿತ್ತು. ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವುದಾಗಿ ಮಾಹಿತಿ ನೀಡಿದ್ದರು.
    5.45ಕ್ಕೆ ಮತ್ತೆ ಕರೆ ಮಾಡಿ, ಆಸ್ಪತ್ರೆಗೆ ನಾನೇ ಬರುವುದಾಗಿ ಸ್ವಯಂಸೇವಕ ಹೇಳಿಕೊಂಡರು. ಹಾಗೆ ಬರುವಂತಿಲ್ಲ. ಸೋಂಕಿತರನ್ನು ಕರೆದುಕೊಂಡು ಹೋಗುವ ಮಾರ್ಗಸೂಚಿಯಂತೆ ತಮ್ಮನ್ನು ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಗುವುದೆಂದು ಉತ್ತರ ನೀಡಲಾಗಿತ್ತು.
    ಈ ಸುದ್ದಿ ತಿಳಿದ ದೃಶ್ಯವಾಹಿನಿ ಪ್ರತಿನಿಧಿಗಳು ಸ್ವಯಂಸೇವಕನನ್ನು ಸಂಪರ್ಕಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗದಿರುವ ಬಗ್ಗೆ ವಿಡಿಯೋ ಮಾಡಿ ಕಳುಹಿಸುವಂತೆ ಹೇಳಿದರು. ತನಗೆ ಸೋಂಕು ಬಂದಿರುವುದು ಸಮಾಜದಲ್ಲಿ ಬಹಿರಂಗವಾಗುವುದು ಇಚ್ಛಿಸದ ಸ್ವಯಂಸೇವಕ ರಾತ್ರಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಿದ್ರೆಗೆ ಜಾರಿದರು.
    ಭಾನುವಾರ ಮುಂಜಾನೆ 5.30 ಕ್ಕೆ ಮೊಬೈಲ್ ಸ್ವಿಚ್ ಆನ್ ಮಾಡಿದ ತಕ್ಷಣ, ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜಿನ ವೈದ್ಯ ಡಾ.ಮಹೇಶ್ ಕರೆ ಮಾಡಿ ಮಾತನಾಡಿದರು. ರಾತ್ರಿ ನಿಮ್ಮ ಮೊಬೈಲ್‌ಗೆ ಕರೆ ಮಾಡಿದ್ದು, ಸ್ವಿಚ್ ಆಫ್ ಆಗಿತ್ತೆಂದರು. 6.30 ಕ್ಕೆ ಮನೆ ಬಳಿ ಆಗಮಿಸಿದ ಅಂಬುಲೆನ್ಸ್‌ನಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾದರು. ಸೋಂಕಿತನಲ್ಲಿ ಹೈ ಶುಗರ್ ಕಾಣಿಸಿಕೊಂಡಿದ್ದು, ವೆಂಟಿಲೇಟರ್ ಮೂಲಕ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ.

ಡಿಎಚ್‌ಒ ನಕಾರಸ್ವಯಂ ಸೇವಕನಿಗೆ ಸೋಂಕು ದೃಢಪಟ್ಟ ಬಳಿಕವೂ ಆಸ್ಪತ್ರೆಗೆ ಕರೆದುಕೊಂಡು ಹೋಗದಿರುವ ಬಗ್ಗೆ ಬಿಜೆಪಿ ಮುಖಂಡರು, ಸ್ವಯಂ ಸೇವಕರು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಗಮನಕ್ಕೆ ತಂದರು. ತಕ್ಷಣ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್‌ಗೆ ಮಾಹಿತಿ ನೀಡಿದರು. ಅಂತಹ ಪ್ರಕರಣ ಇಲ್ಲ ಎಂದು ಡಿಎಚ್‌ಒ ನಿರಾಕರಿಸಿದರೆಂಬ ಮಾಹಿತಿ ಬೆಳಕಿಗೆ ಬಂದಿದೆ.

ಸೇನಾನಿಗೆ ನೀಡುವ ಮರ್ಯಾದೆ ಇದೇನಾ…
ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಅಂತ್ಯಕ್ರಿಯೆ ನೆರವೇರಿಸಲು ಸ್ವಯಂ ಪ್ರೇರಿತವಾಗಿ ತೆರಳಿದ್ದ ಸಮಾಜ ಸೇವಕ ಒಂದು ವಾರದಿಂದ ಆರೋಗ್ಯ ಸರಿ ಇಲ್ಲದ್ದರಿಂದ ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಪಟ್ಟಿದ್ದರು. ಶನಿವಾರ ಮಧ್ಯಾಹ್ನ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮನೆಯಲ್ಲಿ ಕಾಯುವಂತೆ ಮಾಡಲಾಗಿದೆ. ಕರೊನಾ ಸೇನಾನಿಗೆ ನೀಡಿರುವ ಮರ್ಯಾದೆ ಇದೇನಾ ಎಂದು ಬಿಜೆಪಿ ಸೋಮವಾರಪೇಟೆ ತಾಲೂಕು ವಕ್ತಾರ ಕೆ.ಜಿ.ಮನು ವಾಟ್ಸಾಪ್ ಗ್ರೂಪ್‌ನಲ್ಲಿ ಪ್ರಶ್ನಿಸಿದ್ದರು.16 ಗಂಟೆ ಬಳಿಕ ಕೋವಿಡ್ ಆಸ್ಪತ್ರೆಗೆ ಸೋಂಕಿತರನ್ನು ಕರೆದುಕೊಂಡು ಹೋಗಲಾಗಿದೆ. ಇಷ್ಟೊಂದು ನಿರ್ಲಕ್ಷೃ ಏಕೆ ಎಂದು ಕಡಗದಾಳಿನ ಸ್ವಾಮಿ ವಿವೇಕಾನಂದ ಯುವಕ ಸಂಘ ಅಧ್ಯಕ್ಷ ಕೆ.ಎಸ್. ಗಣೇಶ್‌ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಸ್ಪಷ್ಟನೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿಜಯವಾಣಿ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಶನಿವಾರ ಸತತ ದೂರವಾಣಿ ಕರೆ ಬಳಿಕ ಸಂಜೆ 5.24 ಕ್ಕೆ ಜಿಲ್ಲಾ ಸರ್ವೇಕ್ಷಣಾ ತಂಡ ಸೋಂಕಿತ ವ್ಯಕ್ತಿಗೆ ಸೋಂಕು ಬಂದಿರುವ ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿರುವುದನ್ನು ವೈದ್ಯರು ದೃಢಪಡಿಸಿಕೊಂಡಿದ್ದರು. ಸಾಮಾನ್ಯವಾಗಿ ಸಂಜೆ 5 ಗಂಟೆ ಮೇಲೆ ಸೋಂಕು ದೃಢ ಪಟ್ಟ ವ್ಯಕ್ತಿಯನ್ನು ಮರುದಿನ ಮುಂಜಾನೆ ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವುದು ಪ್ರಕ್ರಿಯೆ. ಸಂಜೆ ಮೇಲೆ ಸೋಂಕು ದೃಢಪಟ್ಟ ಪ್ರಕರಣಗಳ ಬಗ್ಗೆ ಮರುದಿನ ಮಾಧ್ಯಮ ಪ್ರಕಟಣೆ ನೀಡಲಾಗುತ್ತದೆ. ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಸೋಂಕಿತ ವ್ಯಕ್ತಿ ಮನೆಯಲ್ಲಿ ವಾಸ್ತವ್ಯ ಮಾಡಲು ಅವಕಾಶವಿದೆ. ಇದು ಸೋಂಕಿತನ ಆರೋಗ್ಯ ಸ್ಥಿರವಾಗಿದ್ದಾಗ ಮಾತ್ರ ಅನ್ವಯಿಸುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ. ಕರೊನಾ ಸೋಂಕಿನ ವಿಚಾರ ಪ್ರತಿಯೊಬ್ಬರಿಗೂ ಹೊಸತು. ಈ ವಿಚಾರದಲ್ಲಿ ಪ್ರತಿಯೊಬ್ಬರಲ್ಲಿಯೂ ಸಾಕಷ್ಟು ಗೊಂದಲ ಮೂಡುವುದು ಸಹಜ. ಜಿಲ್ಲಾಡಳಿತ ಸಾರ್ವಜನಿಕರ ಅನುಮಾನ ಪರಿಹರಿಸಲು ಸ್ಪಷ್ಟೀಕರಣ ನೀಡಲು ಸಿದ್ಧವಾಗಿದೆ. ಸಾರ್ವಜನಿಕರ ಸಲಹೆ ಸದಾ ಸ್ವೀಕರಿಸಲಾಗುತ್ತದೆ.

ನಾನು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರಲಿಲ್ಲ
ಸೋಂಕಿನಿಂದ ಮೃತಪಟ್ಟ ಚೇರಂಬಾಣೆ ನಿವಾಸಿ ಅಂತ್ಯಸಂಸ್ಕಾರದಲ್ಲಿ ಸ್ವಯಂಸೇವಕನಾಗಿ ಪಾಲ್ಗೊಳ್ಳಬೇಕಾಗಿತ್ತು. ರುದ್ರಭೂಮಿಗೆ ತಲುಪುವುದು 10 ನಿಮಿಷ ತಡವಾಗಿದ್ದರಿಂದ ಕೆ.ಕೆ. ಮಹೇಶ್‌ಕುಮಾರ್ ಪಿಪಿಇ ಕಿಟ್ ಧರಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದರು. ನಾನು ಅಂತ್ಯ ಸಂಸ್ಕಾರ ವಿಧಿವಿಧಾನದಲ್ಲಿ ಪಾಲ್ಗೊಂಡಿರಲಿಲ್ಲ. ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ನಾಲ್ವರನ್ನು ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ಸ್ಯಾನಿಟೈಸ್ ಮಾಡಲಾಗಿತ್ತು. ಅಲ್ಲಿಂದ 10ದಿನ ಮನೆಯಿಂದ ಹೊರಗೆ ಹೋಗಿರಲಿಲ್ಲ. ಕೆಮ್ಮು, ಜ್ವರ ಇದ್ದಿದ್ದರಿಂದ ಕೋವಿಡ್ ಆಸ್ಪತ್ರೆಗೆ ಶುಕ್ರವಾರ ಮಧ್ಯಾಹ್ನದ ಮೇಲೆ ತೆರಳಿ ಗಂಟಲು ದ್ರವ ಮಾದರಿ ನೀಡಿದ್ದೆ. ಶನಿವಾರ ಅಶ್ವಿನಿ ಆಸ್ಪತ್ರೆಗೆ(ಕೋವಿಡೇತರ ಆಸ್ಪತ್ರೆ) ತೆರಳಿ ಶುಗರ್ ಪರೀಕ್ಷೆ ಮಾಡಿಸಿಕೊಂಡಿದ್ದೆ. ಶನಿವಾರ ಮಧ್ಯಾಹ್ನ ಮೇಲೆ ಮೊಬೈಲ್ ಸೈಲೆಂಟ್‌ನಲ್ಲಿಟ್ಟು, ನಿದ್ರೆ ಮಾಡಿದ್ದೆ. 17 ಮಿಸ್ಡ್ ಕಾಲ್ ಇದ್ದ ಮೊಬೈಲ್ ಸಂಖ್ಯೆಗೆ ಸಂಜೆ 5 ಗಂಟೆಗೆ ಕರೆ ಮಾಡಿದಾಗ ಸೋಂಕು ದೃಢಪಟ್ಟಿರುವ ಮಾಹಿತಿ ನೀಡಿದರು. 5.45ಕ್ಕೆ ಮತ್ತೆ ಕರೆ ಮಾಡಿ, ನಾನೇ ಆಸ್ಪತ್ರೆಗೆ ಬರುವುದಾಗಿ ಹೇಳಿದ್ದೆ. ಹಾಗೇ ಮಾಡುವಂತಿಲ್ಲ. ಮಾರ್ಗಸೂಚಿಯಂತೆ ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿದರು. ತದನಂತರ ಚಾನಲ್‌ನವರು ವಿಡಿಯೋ ಮಾಡಿ ಕಳುಹಿಸಲು ಹೇಳಿದ್ದರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ನಿದ್ರೆ ಮಾಡಿದೆ. ಭಾನುವಾರ ಬೆಳಗ್ಗೆ 5.30ಕ್ಕೆ ಮೊಬೈಲ್ ಸ್ವಿಚ್ ಆನ್ ಮಾಡಿದಾಗ ಡಾ.ಮಹೇಶ್ ಕರೆ ಮಾಡಿದರು. 6.30ಕ್ಕೆ ಅಂಬುಲೆನ್ಸ್ ಮನೆ ಬಳಿ ಬಂತೆಂದು ಸೋಂಕಿತ ಸ್ವಯಂ ಸೇವಕ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.