ವಿಜಯಪುರ: ದಿನನಿತ್ಯ ಕನಿಷ್ಠ 30 ನಿಮಿಷ ಬಿರುಸಿನ ನಡಿಗೆ, ನಿಯಮಿತ ವ್ಯಾಯಾಮ, 20 ನಿಮಿಷದ ಈಜು ಹಾಗೂ ನಿಯಮಿತ ಯೋಗಾಭ್ಯಾಸ ಮುಂತಾದ ಉತ್ತಮ ಅಭ್ಯಾಸ ರೂಢಿಸಿಕೊಳ್ಳುವ ಮೂಲಕ ಕ್ರೀಯಾಶೀಲರಾಗಿರಲು ಸಾಧ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್ತ ಗುಣಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಎನ್ಸಿಡಿ ಟಕ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ವಿಶ್ವ ಹೃದಯ ದಿನಾಚರಣೆ ಮತ್ತು ವಿಶ್ವ ರೇಬೀಸ್ ದಿನಾಚರಣೆ ಹಿನ್ನೆಲೆ ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿ ನಡೆದ ಜನ ಜಾಗೃತಿ ಜಾಥಾಗೆ ಜಿಲ್ಲಾ ಕಾರಾಗೃಹ ಅಧಿಕ್ಷಕ ಡಾ. ಐ.ಜೆ. ಮ್ಯಾಗೇರಿ ಮತ್ತು ಡಾ. ಎಲ್.ಎಚ್. ಬಿದರಿ ಅವರೊಂದಿಗೆ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿಯಮಿತ ಯೋಗಾಭ್ಯಾಸದಿಂದ ಮಾನಸಿಕ ಒತ್ತಡ ಹಾಗೂ ಉದ್ವೇಗ ನಿಯಂತ್ರಿಸಬಹುದು ಎಂದರು.
ಚಿಕ್ಕಮಕ್ಕಳ ತ ಡಾ. ಎಲ್.ಎಚ್. ಬಿದರಿ ಮಾತನಾಡಿ, ಧೂಮಪಾನ ಮಾಡುವುದರಿಂದ ರಕ್ತದಲ್ಲಿ ಕೊಬ್ಬಿನಾಂಶ ಹೆಪ್ಪುಗಟ್ಟಿ ರಕ್ತನಾಳಗಳನ್ನು ಕುಗ್ಗಿಸುತ್ತದೆ, ನಿಯಮಿತ ವ್ಯಾಯಾಮದಿಂದ ಹೃದಯಾಘಾತವನ್ನು ತಡೆಗಟ್ಟಿಬಹುದು ಎಂದರು.
ಕಾರ್ಡಿಯಾಲಾಜಿಸ್ಟ್ ಡಾ. ಗೌತಮ ವಗ್ಗರ ಹೃದಯದ ಕಾಳಜಿ ಹಾಗೂ ತಡೆಗಟ್ಟುವಿಕೆ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಅಪ್ಪಾಸಾಹೇಬ ಇನಾಮದಾರ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಎಂ.ಬಿ. ಬಿರಾದಾರ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಜಾನ್ ಕಟವಟೆ, ಕೆ.ಡಿ. ಗುಂಡಬಾವಡಿ, ಡಾ. ಪರಸುರಾಮ ಹಿಟ್ಟನಳ್ಳಿ, ಜಿ.ಎಂ. ಕೋಲೂರ, ಎನ್.ಆರ್. ಬಾಗವಾನ, ಡಾ. ಸುರೆಶ ಪಾಸ್ಚಾಪುರ ಮತ್ತಿತರರಿದ್ದರು.