ಶಿವಮೊಗ್ಗ: ನಮ್ಮ ಜಿಲ್ಲೆಯ ಖ್ಯಾತ ಸಾಹಿತಿಗಳು, ಹೆಸರಾಂತ ರಾಜಕಾರಣಿಗಳು, ಹೋರಾಟಗಾರರಿಗೆ ಜನ್ಮ ನೀಡಿದೆ. ಶಿಕ್ಷಣ ಸಚಿವರು ಅವರ ಖಾತೆಯ ಘನತೆಗೆ ತಕ್ಕಂತೆ ಮಾತನಾಡಬೇಕು. ಪ್ರತಿಪಕ್ಷದವರನ್ನು ಟೀಕಿಸುವಾಗ ಭಾಷೆ ಮೇಲೆ ಹಿಡಿತವಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಚ್ಚರಿಕೆ ನೀಡಿದರು.
ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಹರತಾಳು ಹಾಲಪ್ಪ ಕುರಿತಾಗಿ ಏಕವಚನ ಪ್ರಯೋಗದ ಜತೆಗೆ ಆಕ್ಷೇಪಾರ್ಹ ಪದಗಳನ್ನೂ ಬಳಸಿದ್ದೀರಿ. ಹಾಲಪ್ಪ ಹಿರಿಯ ಶಾಸಕ. ಒಮ್ಮೆ ಸಚಿವರೂ ಆಗಿದ್ದವರು. ವಯಸ್ಸಿನಲ್ಲೂ ನಿಮಗಿಂತ ದೊಡ್ಡವರು. ಅವರ ಬಗ್ಗೆ ಅನಪೇಕ್ಷಿತ ಪದ ಬಳಸಿದ್ದು ಖಂಡನೀಯ ಎಂದು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿವೈಆರ್, ಆಡಳಿತ ಹಾಗೂ ಪ್ರತಿಪಕ್ಷ ನಡುವೆ ಟೀಕೆ ಸಹಜ. ಆದರೆ ಅದರಲ್ಲಿ ಸಂಯಮ ಇರಬೇಕು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ವಿಪಕ್ಷ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ನಾವು ಅವರ ಸ್ಥಾನಕ್ಕೆ ಗೌರವ ನೀಡುತ್ತಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಲಿ ಎಂದರು.
ಎಸ್.ಬಂಗಾರಪ್ಪ ಅವರು ಕುವೆಂಪು ವಿವಿ ಆರಂಭಕ್ಕೆ ಕಾರಣರಾಗಿದ್ದರು. ಇದೇ ವಿವಿಯಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ. ಬಂಗಾರಪ್ಪ ಅವರು ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಯಾವ ತಕಾರಾರೂ ಇಲ್ಲ. ಜಿಲ್ಲೆಗೂ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ.
ಆದರೆ ಕುವೆಂಪು ವಿವಿ ಆರಂಭವಾಗಿದ್ದು ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ. ಎಲ್ಲದನ್ನೂ ನಮ್ಮ ಅಪ್ಪ ಮಾಡಿದ್ದು ಎಂದು ಹೇಳಿಕೊಳ್ಳುವ ಬದಲು ನಿಮ್ಮ ಸಾಧನೆ ಏನು ಎಂಬುದನ್ನು ಜನರಿಗೆ ತಿಳಿಸಿ ಎಂದು ಬಿವೈಆರ್ ವಾಗ್ದಾಳಿ ನಡೆಸಿದರು.