ಅರಣ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತಿರುವ ಕೊಲ್ಲೀರ ಬೋಪಣ್ಣ. 
ಜಿಲ್ಲೆ

ಕಾಡಾನೆಗಳ ಹಾವಳಿ ನಿಯಂತ್ರಿಸಿ

ನಾಗೇಶ ಎಸ್

ಗೋಣಿಕೊಪ್ಪಲು: ಕೆಲ ದಿನಗಳ ಹಿಂದೆ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಡಾನೆಗಳ ದಾಂಧಲೆಯಿಂದ ಅಪಾರ ಪ್ರಮಾಣದ ಕಾಫಿ, ಕರಿಮೆಣಸು, ತೆಂಗು, ಅಡಕೆ, ಬಾಳೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ಕೊಲ್ಲೀರ ಬೋಪಣ್ಣ ಅಧ್ಯಕ್ಷತೆಯಲ್ಲಿ ಭಾನುವಾರ ಪೊನ್ನಂಪೇಟೆ ಹಾಗೂ ಮಾಕುಟ್ಟ ವಲಯ ಅರಣ್ಯ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಕಾಡಾನೆಗಳ ಉಪಟಳಕ್ಕೆ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗ್ರಾಮಸ್ಥರು ಹಲವು ಸಲಹೆಗಳನ್ನು ನೀಡಿದರು. ಕಾಡಾನೆಗಳ ಸಮಸ್ಯೆಯಿಂದ ರೈತರು ಹಾಗೂ ಬೆಳೆಗಾರರು ನಿರಂತರ ಬೆಳೆ ನಷ್ಟಗೊಳ್ಳುತ್ತಿದ್ದು, ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ಗ್ರಾಮ ಪಂಚಾಯಿತಿಯಲ್ಲಿಯೇ ಬೆಳೆ ನಷ್ಟದ ಬಗ್ಗೆ ರೈತರಿಂದ ಅರ್ಜಿ ಸ್ವೀಕರಿಸಲು ನಿರ್ಣಯ ಕೈಗೊಳ್ಳಲಾಯಿತು.

ಅರಣ್ಯಾಧಿಕಾರಿಗಳು ಪಂಚಾಯಿತಿಗೆ ಆಗಮಿಸಿ ಅರ್ಜಿ ನೀಡಬಹುದು ಎಂದು ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್, ಮಾಕುಟ್ಟ ವಲಯ ಅರಣ್ಯಾಧಿಕಾರಿ ಕಿರಣ್ ಆಚಾರ್ಯ ಮಾಹಿತಿ ನೀಡಿದರು. ವನ್ಯ ಪ್ರಾಣಿಗಳಿಂದ ನಷ್ಟದ ಪರಿಹಾರ ಹಣವನ್ನು ಮೇ ತಿಂಗಳ ಅಂತ್ಯದವರೆಗೆ ಈಗಾಗಲೇ ನೀಡಲಾಗಿದೆ. ಇನ್ನುಳಿದ ಅರ್ಜಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಬೋಪಣ್ಣ ಮಾತನಾಡಿ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಅಧಿಕವಾಗಿದೆ. ಇದರಿಂದ ಜನರು ಕಷ್ಟದಲ್ಲಿ ಸಿಲುಕಿದ್ದಾರೆ. ಸಣ್ಣ ಸಣ್ಣ ರೈತರು ಬಹಳಷ್ಟು ನೊಂದಿದ್ದಾರೆ. ಕಾಡಾನೆಯಿಂದ ಬೆಳೆ ನಷ್ಟಗೊಂಡು ತೋಟಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ. ಆದ್ದರಿಂದ ನಷ್ಟ ಪರಿಹಾರ ಗರಿಷ್ಠ ಪ್ರಮಾಣದಲ್ಲಿ ನೀಡಬೇಕು. ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರವನ್ನು ಇಲಾಖೆಗೆ ನೀಡಲಾಗುತ್ತದೆ. ಗ್ರಾಮಸ್ಥರು ದೂರವಾಣಿ ಮೂಲಕ ಸಮಸ್ಯೆ ತೋಡಿಕೊಂಡಾಗ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು. ಪೊನ್ನಂಪೇಟೆ ಹಾಗೂ ಮಾಕುಟ್ಟ ವಲಯಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಇದರಿಂದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬಹುದು. ಪರಸ್ಪರ ಹೊಂದಾಣಿಕೆ ಮೂಲಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಹೆಚ್ಚುವರಿ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಅನುದಾನ ಸದ್ಬಳಕೆ ಮಾಡಿಕೊಂಡು ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ತಿಳಿಸಿದರು.

ಸುತ್ತಮುತ್ತಲಿನ ಗ್ರಾಮಸ್ಥರು ಕಾಡಾನೆಯಿಂದ ನಷ್ಟಗೊಂಡ ಬಗ್ಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರು. ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಶ್ರೀಧರ್, ಇತರರು ಇದ್ದರು.