ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ರಾಸುಗಳಿಗೆ ಅಕ್ಟೋಬರ್‌ನಲ್ಲಿ ಕಾಣಿಸಿಕೊಂಡಿದ್ದ ಚರ್ಮಗಂಟು ವ್ಯಾದಿ ಹತೋಟಿಗೆ ಬಂದಿದೆ.
ಸುಮಾರು 150 ರಾಸುಗಳಲ್ಲಿ ರೋಗ ಕಾಣಿಸಿಕೊಂಡಿತ್ತು. ಕರೊನಾ ಕಾರಣದಿಂದ ಕಾಲುಬಾಯಿ ಲಸಿಕೆ ಅಭಿಯಾನಕ್ಕೆ ಹಿಂದೇಟು ಹಾಕಿದ್ದ ಸಿಬ್ಬಂದಿ, ಚರ್ಮಗಂಟು ಕಾಯಿಲೆಗೂ ಚಿಕಿತ್ಸೆ ನೀಡಲು ಹಿಂಜರಿಯುವ ಸ್ಥಿತಿ ಇತ್ತು. ಆದರೆ ಜಿಲ್ಲಾ ಪಶುಪಾಲನಾ ಇಲಾಖೆ ಹಿರಿಯ ಅಧಿಕಾರಿಗಳ ಮನವೊಲಿಕೆ ಬಳಿಕ ಚರ್ಮಗಂಟು ಕಾಯಿಲೆ ಇರುವ ರಾಸುಗಳನ್ನು ಪತ್ತೆ ಹಚ್ಚಿ ಸ್ಥಳೀಯ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿತ್ತು. ಪರಿಣಾಮವಾಗಿ ಅಷ್ಟೂ ರಾಸುಗಳು ಸಂಪೂರ್ಣ ಗುಣಮುಖವಾಗಿವೆ. ಮತ್ತೆಲ್ಲೂ ಹರಡದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಶು ವೈದ್ಯಾಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.
ಜಾನುವಾರುಗಳಲ್ಲಿ ಇದೇ ಮೊದಲ ಬಾರಿಗೆ ಕಂಡುಬಂದಿದ್ದ ಚರ್ಮಗಂಟು (ಲಂಫಿ ಸ್ಕಿನ್ ಡಿಸೀಸ್) ಹತೋಟಿಗೆ ಬಂದಿರುವುದು ರೈತರ ಆತಂಕ ಕಡಿಮೆ ಮಾಡಿದೆ. ಜಿಲ್ಲೆಯಲ್ಲಿ ಸುಮಾರು 18 ಲಕ್ಷ ಜಾನುವಾರುಗಳಿದ್ದು, ರೈತ ಕುಟುಂಬಗಳಿಗೆ ಹೈನುಗಾರಿಕೆಯೇ ಪ್ರಮುಖ ಆದಾಯ ಮೂಲವಾಗಿದೆ.
2019ರಲ್ಲಿ ಪ್ರತ್ಯಕ್ಷ: ಆಫ್ರಿಕಾ, ಯುರೋಪ್, ರಷ್ಯಾಕ್ಕೆ ಸೀಮಿತವಾಗಿದ್ದ ರೋಗ 2019ರಲ್ಲಿ ಕೇರಳ ಹಾಗೂ ಒಡಿಶಾದಲ್ಲಿ ಕಾಣಿಸಿಕೊಂಡಿತ್ತು. ಪ್ರಸಕ್ತ ಸಾಲಿನ ಆಗಸ್ಟ್‌ನಲ್ಲಿ ರಾಜ್ಯದ ಕಲಬುರಗಿ, ಯಾದಗಿರಿ, ಹಾಸನದಲ್ಲಿ ಕಾಣಿಸಿಕೊಂಡಿದ್ದ ವ್ಯಾದಿ ಅಕ್ಟೋಬರ್‌ನಲ್ಲಿ ಜಿಲ್ಲೆಗೂ ವ್ಯಾಪಿಸಿತ್ತು.
ರೋಗ ಹರಡುವುದು ಹೇಗೆ?: ಸೊಳ್ಳೆ, ನೊಣ, ಉಣ್ಣೆಗಳಿಂದ ಹರಡುತ್ತದೆ. ಅಲ್ಲದೆ ರೋಗದಿಂದ ಬಳಲುತ್ತಿರುವ ರಾಸುಗಳು ತಿಂದು ಬಿಟ್ಟ ಮೇವು ಮತ್ತು ಕುಡಿದು ಬಿಟ್ಟ ನೀರಿನ ಸೇವನೆಯಿಂದಲೂ ಹರಡುತ್ತದೆ. ಜತೆಗೆ ಸೋಂಕಿತ ರಾಸುವಿನ ರಕ್ತ, ಕೀವುಗಳಿಂದ ಸೋಂಕು ತಗಲುತ್ತದೆ. ಸೋಂಕು ತಗಲಿದ ವಾರದ ಬಳಿಕ ಚರ್ಮದಲ್ಲಿ ಗಂಟು ಕಾಣಿಸಿಕೊಳ್ಳುತ್ತದೆ. ಈ ಸೋಂಕು ತಗಲಿದ ರಾಸುಗಳಲ್ಲಿ ಹಾಲಿನ ಪ್ರಮಾಣ ತೀವ್ರ ಕಡಿಮೆಯಾಗುತ್ತದೆ.
ಸೋಂಕು ತಗಲಿದರೆ ಏನು ಮಾಡಬೇಕು?: ಸೋಂಕು ತಗಲಿದ ರಾಸುಗಳನ್ನು ತಕ್ಷಣ ಆರೋಗ್ಯವಂತ ರಾಸುಗಳಿಂದ ಪ್ರತ್ಯೇಕಿಸಬೇಕು. ರಾಸುಗಳಿಗೆ ಸೊಳ್ಳೆ, ನೊಣ ಮತ್ತು ಉಣ್ಣೆ ನಿವಾರಕ ಮುಲಾಮು ಹಚ್ಚಬೇಕು, ರಾಸುಗಳಿಗೆ ಕಡ್ಡಾಯವಾಗಿ ಮೇಕೆ ಸಿಡುಬು (ಗೋಟ್‌ಾಕ್ಸ್) ನಿರೋಧಕ ಲಸಿಕೆ ಹಾಕಬೇಕು.
ಅರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದರಿಂದ ಸೋಂಕು ತೀವ್ರವಾಗಿ ಹರಡುವುದನ್ನು ತಡೆಗಟ್ಟಬಹುದು. ಜಿಲ್ಲೆಯಲ್ಲಿ ಅಕ್ಟೋಬರ್‌ನಲ್ಲಿ ಈ ವ್ಯಾದಿ ಕಾಣಿಸಿಕೊಂಡಿತ್ತು, ಈಗ ಸಂಪೂರ್ಣ ಹತೋಟಿಗೆ ಬಂದಿದ್ದು, ಕಳೆದೆರಡು ತಿಂಗಳಿಂದ ಎಲ್ಲಿಯೂ ಈ ರೋಗದ ಬಗ್ಗೆ ವರದಿಯಾಗಿಲ್ಲ. ಡಾ.ಬಾಲಚಂದ್ರ, ಉಪನಿರ್ದೇಶಕ, ಪಶುಪಾಲನ ಇಲಾಖೆ ಸೊಳ್ಳೆ, ನೊಣಗಳಿಂದ ರಾಸು ರಕ್ಷಿಸಬೇಕು, ರೋಗ ಕಾಣಿಸಿಕೊಂಡ ತಕ್ಷಣವೇ ಸ್ಥಳೀಯವಾಗಿ ಪಶು ಸಿಬ್ಬಂದಿ ಚಿಕಿತ್ಸಾ ಸೌಲಭ್ಯ ಕಲ್ಪಿಸಿದ್ದರಿಂದ ರೋಗ ಹರಡುವುದು ಹತೋಟಿಗೆ ಬಂದಿದೆ. ರೈತರು ಮುಂಜಾಗ್ರತಾ ಕ್ರಮ ಅನುಸರಿಸುವ ಮೂಲಕ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಡಾ.ಅನಿಲ್‌ಕುಮಾರ್, ಪಶು ವೈದ್ಯಾಧಿಕಾರಿ