ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥೃ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು . ಎಂ.ಆರ್.ಸೋಮಣ್ಣ, ಡಾ. ಮನ, ದಯಾನಂದ, ದಮಯಂತಿ , ಚರಿತಾ , ಬಸವರಾಜು ಇದ್ದರು. 
ಜಿಲ್ಲೆ

ದೇಹ, ಮನಸ್ಸುಗಳ ನಿಯಂತ್ರಣವೇ ಯಶಸ್ಸಿನ ಕೀಲಿ ಕೈ

ವಿರಾಜಪೇಟೆ: ದೈಹಿಕ ಮತ್ತು ಮಾನಸಿಕ ಸ್ವಾಸ್ಥೃ ಕುರಿತು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ಕಾರ್ಯಾಗಾರ ಗುರುವಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ತರಬೇತುದಾರ ಎಂ.ಆರ್. ಸೋಮಣ್ಣ ಮಾತನಾಡಿ, ಮನಸ್ಸು ಮತ್ತು ದೇಹವನ್ನು ನಿಯಂತ್ರಿಸಲು ಪ್ರಾಣಾಯಾಮ ಯೋಗಾಸನ ಹಾಗೂ ಕ್ರೀಡೆ ಬಹು ಮುಖ್ಯ. ಪ್ರತಿ ಗಂಟೆಗೆ ಒಮ್ಮೆ ನೀರನ್ನು ಕುಡಿಯಿರಿ, ಮನಸ್ಸನ್ನು ನಿರಂತರವಾಗಿ ಒತ್ತಡಕ್ಕೆ ಒಳಪಡಿಸುವುದರಿಂದ ಪರಿಣಾಮಕಾರಿಯಾಗಿ ಯೋಚಿಸಲು ಆಗುವುದಿಲ್ಲ ಎಂದರು.

ಊಟ ಮತ್ತು ನಿದ್ರೆ ಎರಡು ಮೂಲಭೂತ ಅವಶ್ಯಕತೆಗಳಾಗಿದ್ದು, ಮೂರು ಬಾರಿ ಊಟ, ಏಳು ಗಂಟೆಗಳ ನೆಮ್ಮದಿಯ ನಿದ್ರೆಯು ಆರೋಗ್ಯವಂತರ ಲಕ್ಷಣ ಎಂದು ತಿಳಿಸಿದರು. ದೇಹ ಮತ್ತು ಮನಸ್ಸಿನ ನಿಯಂತ್ರಣವೇ ಯಶಸ್ಸಿನ ಕೀಲಿ ಕೈ ಎಂದರು.

ಮಕ್ಕಳ ಮನೋತಜ್ಞೆ ಡಾ. ಮನ ಮಾತನಾಡಿ, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ನಡುವೆ ಸಂಬಂಧವಿದೆ. ನಮ್ಮ ಆಲೋಚನೆಗಳು, ಭಾವನೆಗಳು,  ನಂಬಿಕೆಗಳು ದೇಹದಲ್ಲಿ ಹಾರ್ಮೋನುಗಳ ಪ್ರತಿಕ್ರಿಯೆಗಳನ್ನು ಪ್ರಚೋದಿಸಬಹುದು. ಇದು ರೋಗನಿರೋಧಕ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮೊಬೈಲ್ ವೀಕ್ಷಣೆ ಕಡಿಮೆ ಮಾಡಿರಿ, ಓದಿನ ಕಡೆ ಗಮನಹರಿಸಿ ಎಂದರು.

ಕಾಲೇಜಿನ ಅಧೀಕ್ಷಕ ಉತ್ತಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯ ಪಾಲನೆ, ನಿರಂತರ ಅಧ್ಯಯನ ರೂಢಿಸಿಕೊಳ್ಳಿರಿ ಎಂದರು. ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜು, ಸಂಚಾಲಕರಾದ ಚರಿತಾ ಎಂ.ಆರ್, ಮಹಿಳಾ ಸಮಿತಿಯ ಸಂಚಾಲಕಿ ದಮಯಂತಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.