ಎನ್.ಆರ್.ಪುರ: ಭತ್ತದ ಸಸಿ ಮಡಿಯಿಂದ ಕಟಾವು ಮಾಡುವವರೆಗೆ ಭತ್ತದ ಬೆಳೆಯಲ್ಲಿ ಕಂಡು ಬರುವ ಬೆಂಕಿ ರೋಗಕ್ಕೆ ಆರಂಭಿಕ ಹಂತದಲ್ಲಿಯೇ ರೋಗದ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬೇಕು ಎಂದು ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕಿ ಮಮತಾ ಹೇಳಿದರು.
ಬುಧವಾರ ತಾಲೂಕಿನ ಕಡಹಿನಬೈಲು ಗ್ರಾಪಂನ ಕರುಗುಂದದ ಪ್ರಗತಿಪರ ಕೃಷಿಕ ಕೆ.ಎಸ್.ದಿವಾಕರ್‌ಗೌಡ ಅವರ ಗದ್ದೆಯಲ್ಲಿ ಆತ್ಮ ಯೋಜನೆಯಡಿ ಆಯೋಜಿಸಿದ್ದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿ, ಭತ್ತದ ಗದ್ದೆಗಳಲ್ಲಿ ಕಂಡು ಬರುವ ಬೆಂಕಿ ರೋಗ ಶಿಲೀಂಧ್ರದಿಂದ ಬರುವ ರೋಗವಾಗಿದ್ದು, ಬೆಳೆಯ ಕಾಂಡ, ಸಂಟು, ತೆನೆ ಹಾಗೂ ಗಣ್ಣಿನ ಭಾಗದಲ್ಲಿ ರೋಗ ಆಕ್ರಮಿಸುತ್ತಿದೆ. ಹವಮಾನ ವೈಪರೀತ್ಯ ಹಾಗೂ ಅತಿಯಾದ ನೈಟ್ರೋಜನ್‌ಯುಕ್ತ ರಾಸಾಯನಿಕ ಬಳಕೆ ಮಾಡುವುದರಿಂದ ಈ ರೋಗ ಕಂಡುಬರುತ್ತಿದೆ. ರೈತರು ಈ ರೋಗದ ಬಗ್ಗೆ ಮುಂಜಾಗ್ರತೆ ವಹಿಸುವುದು ಸೂಕ್ತ ಎಂದರು.
ಬೆಂಕಿ ರೋಗದ ಆರಂಭದಲ್ಲಿ ಎಲೆ ಮೇಲೆ ಚಿಕ್ಕ ಕಂದು ಬಣ್ಣದ ಚುಕ್ಕಿಗಳು ಬರುತ್ತವೆ. ಆ ಸಂದರ್ಭದಲ್ಲಿಯೇ ರೈತರು ರೋಗ ಹರಡದಂತೆ ಗದ್ದೆ ಹಾಗೂ ಗದ್ದೆ ಬದುಗಳಲ್ಲಿರುವ ಕಳೆ ತೆಗೆದು ಸ್ವಚ್ಛಗೊಳಿಸಬೇಕು. ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಸಂಪರ್ಕಿಸಿ ಸರಿಯಾದ ಔಷಧೋಪಾಚಾರ ಮಾಡಬೇಕು. ಇದರಿಂದ ಬೆಂಕಿ ರೋಗ ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.