ಜಿಲ್ಲೆ

ಸುಳ್ಳು ಪ್ರಮಾಣ ಪತ್ರ ನೀಡಿಕೆಗೆ ಕಡಿವಾಣ ಹಾಕಿ

ಜಯತೀರ್ಥ ಪಾಟೀಲ

ಕಲಬುರಗಿ: ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಗಳಲ್ಲಿ ಸುಳ್ಳುಜಾತಿ ಪ್ರಮಾಣಪತ್ರ ನೀಡುತ್ತಿರುವುದು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಹೀಗಾಗಿ ನಿಜವಾದ ಎಸ್ಟಿ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಸಿ ತಿಪ್ಪೇಸ್ವಾಮಿ ಹೇಳಿದರು.
ಈ ಕುರಿತು ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಜಾತಿ ಪ್ರಮಾಣ ಪತ್ರ ನೀಡುತ್ತಿರುವ ತಹಸೀಲ್ದಾರ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಸುಳ್ಳು ಜಾತಿ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಬೇಕು ಎಂದರು.
ಕಾನೂನು ಬಾಹಿರವಾಗಿ ತಳವಾರ್ ಹೆಸರಿನಲ್ಲಿ ನೀಡಿರುವ ಎಸ್ಟಿ ಪ್ರಮಾಣ ಪತ್ರ ವಾಪಸ್ ಪಡೆಯುವಂತೆ ಸಂಬಂಧಿಸಿದ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಟಗರಿ-೧ ರಲ್ಲಿರುವ ಕಬ್ಬಲಿಗ, ಗಂಗಾಮತ, ಕೋಲಿ, ಅಂಬಿಗ, ಪರಿವಾರ ಜಾತಿಗಳ ಜನ ಎಸ್ಟಿ ಪ್ರಮಾಣ ಪತ್ರ ಪಡೆದುಕೊಂಡು ಸರ್ಕಾರದ ಎಲ್ಲ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಇದರಿಂದ ನಿಜವಾದ ಎಸ್ಟಿ ಸಮುದಾಯಕ್ಕೆ ಭಾರಿ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಸಂಗಪ್ಪ ಸೇದಿಮನಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಸುಬೇದಾರ್, ಗುರುರಾಜ ನರಬೋಳಿ, ಗುರುರಾಜ ದೊರೆ, ಮಲ್ಲಿಕಾರ್ಜುನ ಬೀದರ್ ಇದ್ದರು.