ವಾರಾಣಸಿ: ಕಾಶಿಯು ಅತ್ಯಂತ ಪುರಾತನ ನಗರವಾಗಿದ್ದು, ಇಲ್ಲಿಯ ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಹುಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.
ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಜರುಗಿದ "ದಕ್ಷಿಣದ ಪರಂಪರೆ ಹಾಗೂ ಬನಾರಸ್ ಹಿಂದು ವಿಶ್ವವಿದ್ಯಾಲಯ' ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಿತ್ರ ಗಂಗೆಯ ತಟದಲ್ಲಿ ಹಿಂದು ವಿಶ್ವವಿದ್ಯಾಲಯವನ್ನು ನಿರ್ಮಿಸಿದ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರ ಕಾರ್ಯ ಶ್ಲಾಘನೀಯ. ಸುಮಾರು 140 ವಿಭಾಗಗಳು, 40 ಸಾವಿರ ವಿದ್ಯಾಥಿರ್ಗಳು ಕಲಿಯುತ್ತಿದ್ದಾರೆ. ಇದು 4100 ಎಕರೆ 16.5 ಕಿಮೀ ವಿಸ್ತೀರ್ಣದಲ್ಲಿ ಚಾಚಿಕೊಂಡಿದೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯದ ಜನರು ಒಂದೇ ಕಡೆ ಸೇರಿರುವುದು ಸಂತಸ ತಂದಿದೆ ಎಂದರು.
ಕರ್ನಾಟಕದ ಬಹಳ ಜನರು ಶತಮಾನಗಳಿಂದ ಇಲ್ಲಿಯೇ ನೆಲೆಗೊಂಡಿದ್ದು, ವಿಶ್ವವಿದ್ಯಾಲಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಇಲ್ಲಿರುವವರೆಲ್ಲರೂ ಪಂಡಿತರೇ, ಭವ್ಯ ಭಾರತದ ನಿರ್ಮಾಣ ಇಲ್ಲಿಂದಲೇ ಆಗಲಿ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಲಿ. ಈ ಹಬ್ಬ ದೇಶದ ತುಂಬೆಲ್ಲಾ ಹಬ್ಬಲು ವಿಶ್ವವಿದ್ಯಾಲಯ ಕಾರಣವಾಗಲಿ ಎಂದರು.
ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರಿಗೆ ಭಾರತ ರತ್ನ ಎಂದೋ ದೊರಕಬೇಕಿತ್ತು. ಆದರೆ, 2014ರಲ್ಲಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಿ ಪ್ರಧಾನಮಂತ್ರಿ ಮಾಡಿದ್ದಕ್ಕಾಗಿ ಅವರಿಗೆ ಮೋದಿ ಅವರು ಭಾರತ ರತ್ನ ನೀಡಿ ಗೌರವಿಸಿದರು. ಇದು ನಿಮ್ಮಅಮೂಲ್ಯವಾದ ಮತಕ್ಕೆ ಇರುವ ಶಕ್ತಿ ಎಂದು ಟೆಂಗಿನಕಾಯಿ ಹೇಳಿದರು.
ನರೇಂದ್ರ ಮೋದಿ ಅವರು ತಮ್ಮಕರ್ಮಭೂಮಿ ಕಾಶಿಗೆ 10 ವರ್ಷದಲ್ಲಿ 44 ಬಾರಿ ಭೇಟಿ ನೀಡುವ ಮೂಲಕ ಇಲ್ಲಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬನಾರಸ್ ವಿಶ್ವವಿದ್ಯಾಲಯ ಎಲ್ಲದಕ್ಕೂ ಮಾದರಿಯಾಗಿದ್ದು, ಮತದಾನಕ್ಕೂ ಮಾದರಿಯಾಗಲಿ ಎಂದರು.
ಕಳೆದ ಸಲ ಬನಾರಸ್ ವಿವಿ ಬೂತ್ ನಲ್ಲಿ ಶೇ. 20ರಷ್ಟು ಮತದಾನವಾಗಿತ್ತು, ಆದರೆ, ಈ ಬಾರಿ ಇಲ್ಲಿ ಶೇ. 100ರಷ್ಟು ಮತದಾನ ಮಾಡುವ ಮೂಲಕ ಮತದಾನದ ಹಬ್ಬವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಧವ್, ಮಾಜಿ ಶಾಸಕ ಚೋಲಾ ಪುಲಾನಿಸ್ವಾಮಿ, ಉತ್ತರ ಪ್ರದೇಶ ರಾಜ್ಯದ ಉಪಾಧ್ಯಕ್ಷ ಮನೋಜ ಪಾಸ್ವಾಲ, ಪ್ರಮುಖರಾದ ಎಸ್.ವಿ. ಷಣ್ಮುಗಮ್, ಗೀತಾಮೂರ್ತಿ, ಎಸ್.ವಿ.ಎಸ್. ರಾಜು ಹಾಗೂ ಇತರರು ಉಪಸ್ಥಿತರಿದ್ದರು.