ಅಲಗಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೆರೆ ಹೂಳು ತೆಗೆಸುವ ಕಾರ್ಯದ ಭೂಮಿಪೂಜೆ ವೇದಿಕೆ ಕಾರ್ಯಕ್ರಮಕ್ಕೆ ಶ್ರೀಫಲಹಾರ ಪ್ರಭುದೇವ ಸ್ವಾಮೀಜಿ ಚಾಲನೆ ನೀಡಿದರು. ಜಯರಾಮ ನೆಲ್ಲಿತ್ತಾಯ, ಪ್ರವೀಣ್‌ಕುಮಾರ್, ಮಹದೇವಸ್ವಾಮಿ ಇತರರು ಇದ್ದರು. 
ಜಿಲ್ಲೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೊಡುಗೆ ಅಪಾರ

ಹನೂರು:ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ವಿಚಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ ಎಂದು  ಬಂಡಳ್ಳಿ ಮಠದ ಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಅಲಗಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಡಾ.ವೀರೇಂದ್ರ ಹೆಗಡೆ ನೇತೃತ್ವದಲ್ಲಿನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಸಾಮಾಜಿಕ ಸೇವಾ ಕಾರ್ಯಗಳ ಜತೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ. ದೇಗುಲಗಳ ಅಭಿವೃದ್ಧಿ, ಡೇರಿಗಳ ಕಟ್ಟಡ ನಿರ್ಮಾಣಕ್ಕೆ ಪ್ರೋತ್ಸಾಹ ಅನುದಾನ, ಸ್ವಚ್ಛತಾ ಕಾರ್ಯ, ಅಸಹಾಯಕರಿಗೆ ಮನೆ ನಿರ್ಮಾಣ, ಕೆರೆ ಅಭಿವೃದ್ಧಿ, ವಿಕಲಚೇತನರಿಗೆ ಸವಲತ್ತು ವಿತರಣೆ, ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಸೇರಿದಂತೆ ಇನ್ನು ಹಲವು ಸೇವಾ ಕಾರ್ಯವನ್ನು ಕೈಗೊಂಡಿದೆ. ಅಲ್ಲದೆ ಮಹಿಳೆಯರ ಸಬಲೀಕರಣ ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಹಲವು ಸವಲ್ತತು ಒದಗಿಸುತ್ತಿದೆ. ಇದೀಗ ಅಂತರ್ಜಲ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಗ್ರಾಮದ ಕೆರೆ ಹೂಳನ್ನು ತೆಗೆಸುವ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ತಿಳಿಸಿದರು.

ಯೋಜನೆಯ ವಿಭಾಗೀಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಯೋಜನೆ ವತಿಯಿಂದ ಚಾ.ನಗರ ಜಿಲ್ಲೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಕೆರೆಗಳಲ್ಲಿ ಹೂಳು ತೆಗೆಸುವ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೆರೆಯಲ್ಲಿ ನೀರಿನ ಸಂಗ್ರಹಣಾ ಪ್ರಮಾಣ ಹೆಚ್ಚಾಗಿ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಆದ್ದರಿಂದ ಗ್ರಾಮಸ್ಥರು ಕೆರೆಯ ಸ್ವಚ್ಛತೆ ಕಾಪಾಡುವುದರ ಜತೆಗೆ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ತಾಲೂಕು ಯೋಜನಾಧಿಕಾರಿ ಪ್ರವೀಣ್‌ಕುಮಾರ್, ಇಂಜಿನಿಯರ್ ಮಹದೇವಸ್ವಾಮಿ, ಯೋಜನೆಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.