ಸಿಂದಗಿ : ಆರು ದಶಕದ ಕೇಂದ್ರ ಸಾಹಿತ್ಯ ಅಕಾಡೆಮಿಯು ಏಳು ಸಹಸ್ರ ಪುಸ್ತಕ ಪ್ರಕಟಣೆಗಳ ಜತೆಗೆ ಪುರಸ್ಕಾರ, ಉಪನ್ಯಾಸ, ಸಮ್ಮಾನಗಳೊಂದಿಗೆ ವಿಭಿನ್ನ ಚಟುವಟಿಕೆಗಳ ಮೂಲಕ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಭಾನುವಾರ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನೆಲೆ ಪ್ರಕಾಶನ ಸಂಸ್ಥೆಯ ಸಾಹಿತ್ಯ ವೇದಿಕೆಯಡಿ ‘ಸಮಕಾಲೀನ ಕನ್ನಡ ಸಣ್ಣ ಕತೆಗಳಲ್ಲಿನ ಗ್ರಾಮ ಭಾರತ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಲಘುತ್ವದಿಂದ ಪ್ರಭುತ್ವದೆಡೆಗೆ ಬದುಕಿನ ಅನುಭವದ ಕಥನಗಳ ಸಾಕ್ಷಿತನಕ್ಕೆ ಕತೆಗಳು ರೂಪಿತವಾಗಬೇಕು ಎಂದರು.
ಸಾಹಿತಿ ಡಾ. ರಾಜಶೇಖರ ಹಳಮನಿ, ಡಾ. ಚನ್ನಪ್ಪ ಕಟ್ಟಿ ಹಾಗೂ ಪಾರ್ವತಿ ಪಿಟಗಿ ಅವರ ಕತೆಗಳ ಕುರಿತು ಮಾತನಾಡಿ, ಕಟ್ಟಿ ಅವರ ಕತೆಗಳ ಚಲನಶೀಲತೆ ಒಂದು ಹೊಸ ತಲೆಮಾರನ್ನು ಪ್ರಭಾವಿಸಬಲ್ಲ, ಓದುಗನ ಅಂತಃರಂಗವನ್ನು ಕಲುಕುವ, ಆತ್ಮ ನಿವೇದನೆಯ ಪಾತ್ರಗಳು, ಭಾಷಿಕ ಲಯದ ಪ್ರಜ್ಞಾಪೂರ್ವ ಮಾದರಿ ವಿಭಿನ್ನ ಸಂವೇದನೆಯನ್ನು ಸಜಿಸಿ, ಬದುಕಿನ ವಿನ್ಯಾಸವನ್ನು ಅನುಸರಿಸುತ್ತವೆ ಎಂದರು.
ಸಾಹಿತಿ ಪಾರ್ವತಿ ಪಿಟಗಿ ಅವರ ಕತೆಗಳಲ್ಲಿ ಪುರುಷಾಹಂಕಾರ ಕಾಣುವುದಿಲ್ಲ. ಅಲ್ಲಿ ಮಹಿಳೆ, ಸಾಮಾಜಿಕ ಲೋಕದ ವಾಸ್ತವತೆ, ಕೌಟುಂಬಿಕ ನಿಲುವುಗಳ ಬಿಂಬವು ಪ್ರಸ್ತುತ ಸಮಾಜದ ಚಿತ್ರಣಗಳಾಗಿವೆ. ಸುಧಾರಣಾವಾದಿ ಸೀ ನೆಲೆಯನ್ನು ನಿರೂಪಿಸುವುದರ ಜತೆಗೆ ಸಾಮಾಜಿಕ ಬದಲಾವಣೆಯ ಅಸವಾಗಿ ಕಾಣುತ್ತವೆ.
ಗ್ರಾಮೀಣ ಸೊಗಡಿನ ಚಿತ್ರಣಗಳು ಅವರ ಕತೆಗಳಲ್ಲಿ ಗಟ್ಟಿ ಗೂಡು ಕಟ್ಟಿಕೊಂಡು ಕುಳಿತಿವೆ. ಕತೆಗಾರ ಡಾ. ಚನ್ನಪ್ಪ ಕಟ್ಟಿ ಅವರು ‘ರತ್ನಾಗಿರಿಯೆಂಬ ಮಾಯೆ’ ಹಾಗೂ ಪಾರ್ವತಿ ಪಿಟಗಿ ಅವರು ‘ಸುಳಿ’ ಎಂಬ ಮರಳುಗಾರಿಕೆಯ ಚಿತ್ರಣದ ತಮ್ಮ ಕತೆಗಳನ್ನು ಓದಿದರು.
ಮನು ಪತ್ತಾರ, ದೇವು ಮಾಕೊಂಡ, ಚಿದಂಬರ ಬಂಡಗಾರ, ಸಾವಿತ್ರಿ ಮೋದಿ, ಸಾಯಬಣ್ಣ ಮಾದರ ಅವರು ಸಮಕಾಲೀನ ಕನ್ನಡ ಸಣ್ಣ ಕತೆಗಳಲ್ಲಿ ಗ್ರಾಮ ಭಾರತ ಕುರಿತು ಸಂವಾದ ನಡೆಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಎಂ.ಎಂ. ಪಡಶೆಟ್ಟಿ ಮಾತನಾಡಿದರು.
ಹ.ಮ. ಪೂಜಾರ, ಜಿ.ಆರ್. ಪಡಗಾನೂರ, ಅಶೋಕ ಅಲ್ಲಪೂರ, ಡಾ. ಅರವಿಂದ ಮನಗೂಳಿ, ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ, ಚಂದ್ರಶೇಖರ ದೇವರಡ್ಡಿ, ಕೆ.ಎಚ್. ಸೋಮಾಪುರ, ಐ.ಬಿ. ಬಿರಾದಾರ, ಎಂ.ಎಸ್. ಹಯ್ಯಳಕರ, ಎಸ್.ಕೆ. ಗುಗ್ಗರಿ ಸೇರಿದಂತೆ ಸಾಹಿತ್ಯಾಸಕ್ತರಿದ್ದರು. ಶಿಕ್ಷಕ ಗುರುನಾಥ ಅಳಗುಂಡಗಿ ಸ್ವಾಗತಿಸಿದರು. ರೈತ ಗುರುರಾಜ ಪಡಶೆಟ್ಟಿ ನಿರೂಪಿಸಿದರು.