ಎನ್.ಆರ್.ಪುರ: ಗ್ರಾಮ ಆರೋಗ್ಯ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸೋಣ ಎಂದು ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಸತೀಶ್ ಹೇಳಿದರು.
ಮೆಣಸೂರು ಗ್ರಾಪಂನಲ್ಲಿ ಗ್ರಾಪಂ ಸದಸ್ಯರು ಮತ್ತು ಕಾರ್ಯಪಡೆ ತಂಡದವರಿಗೆ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಎಲ್ಲ ಅಭಿವೃದ್ಧಿ ಕಾರ್ಯಗಳ ಜತೆಗೆ ಆರೋಗ್ಯಕ್ಕೂ ಮಹತ್ವ ನೀಡುವುದರ ಮೂಲಕ ಗ್ರಾಮಗಳ ಅಭಿವೃದ್ಧಿ ಸಾಧಿಸಬೇಕೆಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ನೀಡಿ, ಗ್ರಾಪಂ ಎಲ್ಲ ಸದಸ್ಯರನ್ನು ಒಳಗೊಂಡ ಕಾರ್ಯಪಡೆ ತಂಡಗಳಿಗೆ ಗ್ರಾಮ ಆರೋಗ್ಯ ಕಾರ್ಯಕ್ರಮದ ತರಬೇತಿಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಕರೊನಾ ನಿಯಂತ್ರಣದಲ್ಲಿ ಗ್ರಾಪಂ ಕಾರ್ಯಪಡೆ ತಂಡಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಕಾರ್ಯಪಡೆ ಸಮಿತಿಯ ಮೇಲ್ವಿಚಾರಣೆಯಲ್ಲಿ ಪ್ರಾರಂಭಿಸಲಾಗಿದೆ ಎಂದರು.
ಗ್ರಾಮ ಆರೋಗ್ಯ ಕಾರ್ಯಕ್ರಮದಲ್ಲಿ ಅಸಾಂಕ್ರಾಮಿಕ ರೋಗಗಳು, ಕ್ಷಯ, ಅಪೌಷ್ಟಿಕತೆ ಮತ್ತು ರಕ್ತಹೀನತೆ, ಮಾನಸಿಕ ಆರೋಗ್ಯ, ಬಾಲ್ಯವಿವಾಹ, ಮುಟ್ಟಿನ ನೈರ್ಮಲ್ಯ ಎಂಬ ಪ್ರಮುಖವಾದ ಆರು ಅಂಶಗಳನ್ನು ಅಳವಡಿಸಲಾಗಿದೆ. ಈ ವಿಷಯಗಳ ಮೇಲೆ ಗ್ರಾಮ ಪಂಚಾಯಿತಿ ಕಾರ್ಯಪಡೆ ತಂಡಗಳು ಸಂಪೂರ್ಣ ಮಾಹಿತಿ ಪಡೆದು ಸಾರ್ವಜನಿಕರಿಗೆ ಈ ಕಾಯಿಲೆಗಳ ಪರೀಕ್ಷೆ ಚಿಕಿತ್ಸೆ ಮತ್ತು ಆರೋಗ್ಯ ಶಿಕ್ಷಣ ನೀಡುವುದರ ಮೂಲಕ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಿಳಿಸಿದರು.
ಡಾ. ನಿಶಾಲ್, ಕ್ಷಯ ರೋಗ ಪರಿವೀಕ್ಷಕ ಪವನ್ಕರ್, ನಾಗಲತಾ, ಡೈಸಿ, ಪ್ರಭಾಕರ್ ಬೇರೆ ಬೇರೆ ರೋಗಗಳ ಮಾಹಿತಿ ನೀಡಿದರು.
ಗ್ರಾಪಂ ಉಪಾಧ್ಯಕ್ಷೆ ಪಚ್ಚೆಯಮ್ಮ, ಸದಸ್ಯರಾದ ಡಿ.ಆರ್.ಶ್ರೀನಾಥ್, ಎನ್.ಡಿ.ಪ್ರಸಾದ್, ಶಿಲ್ಪಾ ಅನಿಲ್, ಬಿನುಜೋಸ್ೆ, ಯಾಸ್ಮಿನ್, ಪಿಡಿಒ ಸಂತೋಷ್‌ಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿ ನಮಿತಾ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಇದ್ದರು.