ಪಿರಿಯಾಪಟ್ಟಣ: ಕ್ಷಯರೋಗಮುಕ್ತ ಸಮಾಜ ನಿರ್ಮಾಣಕ್ಕೆ ಸಮುದಾಯದ ಸಹಕಾರ ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಕೆ.ಶ್ರೀನಿವಾಸ್ ತಿಳಿಸಿದರು.
ಕ್ಷಯರೋಗಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ಅಂಗವಾಗಿ ಆರೋಗ್ಯ ಇಲಾಖೆ, ಸಿಇಟಿಐ ಸಹಕಾರ ಸಂಘಟನೆ, ಆಶ್ರಯ ಹಸ್ತ ಟ್ರಸ್ಟ್ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಇತ್ತೀಚೆಗೆ ತಾಲೂಕಿನ ಪೂನಾಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಪ್ರಥಮ ಸಭೆಯಲ್ಲಿ ಮಾತನಾಡಿದರು.
2025 ಕ್ಕೆ ಕ್ಷಯ ರೋಗಮುಕ್ತ ಭಾರತ ನಿರ್ಮಿಸುವ ಸಲುವಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಿಂದಿನ ದಿನಗಳಲ್ಲಿ ಕ್ಷಯರೋಗ ಎಂಬುದು ಭೀಕರ ಕಾಯಿಲೆ ಎಂಬಂತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ಸರ್ಕಾರಗಳು ಕ್ಷಯ ರೋಗ ನಿಯಂತ್ರಣಕ್ಕೆ ಹಲವು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸಿ ಔಷಧೋಪಚಾರ ವ್ಯವಸ್ಥೆ ಮಾಡಿದೆ ಎಂದರು.
ಆಶ್ರಯ ಹಸ್ತ ಟ್ರಸ್ಟ್‌ನ ವಿಕ್ರಂ ಮಾತನಾಡಿ, ಕ್ಷಯರೋಗ ಒಂದು ಪುರಾತನ ಕಾಯಿಲೆ. ಇದು ಪೌಷ್ಟಿಕ ಆಹಾರ ಕೊರತೆಯಿಂದ ಬರುವ ರೋಗ. ರೋಗ ಗುಣಪಡಿಸಿಕೊಳ್ಳಲು ಸರ್ಕಾರ 6 ತಿಂಗಳವರೆಗೆ ಪ್ರತಿ ತಿಂಗಳು 500 ರೂ. ಸಹಾಯಧನ ನೀಡುವುದರ ಜತೆಗೆ ಉಚಿತವಾಗಿ ಔಷಧೋಪಚಾರ ನೀಡುತ್ತಿದೆ. ಪರಿಣಾಮ ಇಂದು ಕ್ಷಯ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದರು.
ಕ್ಷಯರೋಗಮುಕ್ತ ಗ್ರಾಮ ಪಂಚಾಯಿತಿ ನಿರ್ಮಾಣ ಮಾಡುವ ಉದ್ದೇಶದಿಂದ ತಾ.ಪಂ. ಇಒ, ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನೊಳಗೊಂಡಂತೆ ಸಮಿತಿ ರಚಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಶಿವ ನಂಜುಂಡ, ಸದಸ್ಯ ಯೋಗಾನಂದ, ಪಿಡಿಒ ಪರಮೇಶ್, ಸಿಇಟಿಐ ನ ಸದಸ್ಯರಾದ ರಮನ್ ಅರೋರಾ, ಡಾ.ಎಕ್ತಾ ನೇಗಿ, ಡಾ.ಅಂಕಿತಾ ಮೋಕಾಶಿ, ದೇವಲೀನಾ ಚಟರ್ಜಿ ಮತ್ತು ಡಾ.ಹರ್ಷ ಅಗರವಾಲ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗೋವಿಂದರಾಜ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ಸಿಬ್ಬಂದಿ ನವಿತಾ, ಸುಗುಣಾ, ನಿಮಿಷಾ, ಜಗದೀಶ್, ಅಶೋಕ್ ಇದ್ದರು.