ಪಾಂಡವಪುರ: ಸರ್ಕಾರದಿಂದ ಆಯೋಜನೆಗೊಳ್ಳುತ್ತಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ, ಬರ ನಿರ್ವಹಣೆ ಹಾಗೂ ಬೇಬಿ ಬೆಟ್ಟ ದನಗಳ ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಚಲುವಾರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಬೃಹತ್ ಸಭೆ ನಡೆಯಲಿದ್ದು, ಅಧಿಕಾರಿಗಳು ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಇತರ ಎಲ್ಲ ವ್ಯವಸ್ಥೆಗಳನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಎಲ್ಲ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ತಾಲೂಕಿನ ಡಿಂಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಫೆ.8ರಂದು ಸಂವಿಧಾನ ಜಾಥಾ ರಥ ಆಗಮಿಸುತ್ತಿದ್ದು, ಅಧಿಕಾರಿಗಳು ಜಾನಪದ ಕಲಾತಂಡಗಳೊಂದಿಗೆ ರಥವನ್ನು ಸ್ವಾಗತಿಸಬೇಕು. ಈ ರಥ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಗಳ ಗ್ರಾಮಗಳಲ್ಲಿ ಸರ್ಕಾರದ ಸ್ತಬ್ಧಚಿತ್ರದೊಂದಿಗೆ ಸಂಚರಿಸಲಿದ್ದು, ಅಧಿಕಾರಿಗಳು ಜಾಥಾ ಸಂಚರಿಸುವ ಗ್ರಾಮಗಳಲ್ಲಿ ಹಾಜರಿದ್ದು, ಎಲ್ಲ ರೀತಿಯ ವ್ಯವಸ್ಥೆ ಕೈಗೊಳ್ಳಬೇಕು, ಬೀಳ್ಕೊಡುಗೆಯ ಸಂದರ್ಭದಲ್ಲೂ ಹಾಜರಿರಬೇಕು ಎಂದು ಆದೇಶಿದರು.
ಬೇಬಿ ಬೆಟ್ಟದ ದನಗಳ ಜಾತ್ರೆಗೆ ಇಲಾಖೆ ಅಧಿಕಾರಿಗಳು ಪೂರ್ವ ತಯಾರಿ ನಡೆಸಿ ಜಾತ್ರೆ ಯಶಸ್ಸಿಗೆ ಅಗತ್ಯ ಸಹಕಾರ ನೀಡುವ ಜತೆಗೆ ಸೂಕ್ತ ಸಲಹೆಗಳನ್ನು ನೀಡಬೇಕು. ಪ್ರತಿ ವರ್ಷದಂತೆ ವಿವಿಧ ಇಲಾಖೆಗಳು ಯಾವ್ಯಾವ ಜವಾಬ್ದಾರಿ ನಿರ್ವಹಿಸುತ್ತಿದೆ ಅದೇ ರೀತಿ ಯಾವ ಲೋಪವಿಲ್ಲದಂತೆ ನಿಭಾಯಿಸಬೇಕು. ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಸ್ವಚ್ಛತೆ, ರಸ್ತೆಗಳ ದುರಸ್ತಿ, ಹೈಮಾಸ್ಟ್ ದೀಪ ನಿರ್ವಹಣೆ, ಪಶು ವೈದ್ಯಕೀಯ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶೌಚಗೃಹ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಸಿಸಿ ಕ್ಯಾಮರಾ ಅಳವಡಿಕೆಗೆ ಪೊಲೀಸ್ ಇಲಾಖೆಗೆ ಸೂಚಿಸಲಾಗುವುದು. ದನಗಳ ಜಾತ್ರೆಗೆ ಸಂಬಂಧಿಸಿದಂತೆ ಹೊನಗಾನಹಳ್ಳಿ, ಗುಮ್ಮನಹಳ್ಳಿ, ಕಟ್ಟೇರಿ, ಡಿಂಕಾ, ಚಿನಕುರಳಿ, ಬನ್ನಂಗಾಡಿ ಅರಳಕುಪ್ಪೆ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧಿಕಾರಿಗಳು ಹೆಚ್ಚಿನ ಸಹಕಾರ ನೀಡಿ ಜಾತ್ರೆ ಯಶಸ್ಸಿಗೆ ಶ್ರಮಿಸಬೇಕು ಎಂದರು.
ಅಧಿಕಾರಿಗಳ ಗ್ರಾಮ ವಾಸ್ತವ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮ ಮಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಾರಗಳ ಕಾಲ ವಾಸ್ತವ್ಯ ಹೂಡಲಿದ್ದು, ಈ ವೇಳೆ ರೈತರ ಜಮೀನಿನ ಪಹಣಿ, ಸರ್ವೇ, ಹದ್ದುಬಸ್ತು. ಪೋಡಿ ಮನೆ ದಾಖಲೆಗಳ ಸರಿಪಡಿಸುವುದು ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ನಿವಾರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಕಾರ್ಯಕ್ರಮ ಅನುಷ್ಠಾನಗೊಂಡ ಬಳಿಕ ರೈತರು ಮತ್ತೇ ಯಾವುದೇ ಕೆಲಸಕ್ಕೂ ತಾಲೂಕು ಕಚೇರಿ ಅಲೆಯದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ದೇಶ ವಿಭಜಿಸುವ ಆಲೋಚನೆ ಯಾರಿಗೂ ಬರಬಾರದು: ನಾವೆಲ್ಲರೂ ಭಾರತೀಯರು, ನಮಗೆ ಭಾರತ ದೇಶವನ್ನು ವಿಭಜಿಸುವ ಅಲೋಚನೆ ಎಂದಿಗೂ ಬರಬಾರದು. ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ದೇಶದಲ್ಲಿ ಹೆಚ್ಚು ತೆರಿಗೆ ಕಟ್ಟುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಾವು ಕಟ್ಟುವ ತೆರಿಗೆಗೆ ಅನುಗುಣವಾಗಿ ಕೇಂದ್ರ ತೆರಿಗೆ ಹಣ ನೀಡುತ್ತಿಲ್ಲ. ಈ ಬಗ್ಗೆ ರಾಜ್ಯದ ನಾಯಕರು ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರೈತರಿಗೆ ಯಾವುದೇ ಕೊಡುಗೆ ನೀಡಿಲ್ಲ. ರೈತರು ಎಂಎಸ್‌ಪಿ ದರ ಘೋಷಣೆ ಬಗ್ಗೆ ನಿರೀಕ್ಷೆ ಹೊಂದಿದ್ದರು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಾಗದಿರುವುದು ರೈತರಿಗೆ ನಿರಾಶೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ತಾಪಂ ಇಒ ಲೋಕೇಶಮೂರ್ತಿ, ಸಿಡಿಪಿಒ ಪೂರ್ಣಿಮಾ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಪಿಡಬ್ಲುೃಡಿ ಇಲಾಖೆ ಎಇಇ ಆದರ್ಶ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಕುಮಾರ್ ಇತರರಿದ್ದರು.