ಗಂಡಸಿ: ದಾಖಲಾತಿ ಕಡಿಮೆ, ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದರಿಂದ ಒಂದು ವರ್ಷ ಶಾಲೆಯ ಬಾಗಿಲು ಮುಚ್ಚಿದ್ದು ಬೇಸರ ಸಂಗತಿ ಎಂದು ಪಿಎಸಿಸಿ ಬ್ಯಾಂಕ್ ನಿವೃತ್ತ ಕಾರ್ಯದರ್ಶಿ ನಂಜುಂಡೇಗೌಡ ಹೇಳಿದರು.
ಹೋಬಳಿಯ ಯರಗನಾಳು ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳ ದೃಢಸಂಕಲ್ಪದಿಂದ ಮಕ್ಕಳು ಶಾಲೆಗೆ ಬರುವಂತಾಯಿತು ಎಂದರು.
ಶಾಲೆ ಮರು ಪ್ರಾರಂಭವಾದಾಗ ಶಿಕ್ಷಕಿ ರೂಪಶ್ರೀ ಅವರು ಮಾಡಿದ ಕಾರ್ಯ ಮೆಚ್ಚುವಂತಹದ್ದು. ಇದರ ಪರಿಣಾಮ ಮನೆಯಲ್ಲಿ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಈ ಬೆಳವಣಿಗೆಯಿಂದ ಖಾಸಗಿ ಶಾಲೆಗಳ ಮಕ್ಕಳು ನಮ್ಮ ಶಾಲೆಯತ್ತ ಮುಖ ಮಾಡುತ್ತಿದ್ದಾರೆ. 1933ರಲ್ಲಿ ಪ್ರಾರಂಭವಾದ ನಮ್ಮೂರ ಶಾಲೆ ಶತಮಾನೋತ್ಸವಕ್ಕೆ 8 ಮೆಟ್ಟಿಲುಗಳು ಬಾಕಿ ಇದ್ದು ನಾಡಿನ ಗಣ್ಯರು, ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳಿಗೆ ಆಹ್ವಾನ ನೀಡಿ ಅದ್ದೂರಿಯಾಗಿ ಆಚರಿಸಲು ಹಳೇ ವಿದ್ಯಾರ್ಥಿ ಸಂಘ ಸಂಕಲ್ಪ ಮಾಡಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಘು ಅಧ್ಯಕ್ಷತೆ ವಹಿಸಿದ್ದರು. ಚಗಚಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀವಿತಾ ಮಧುಸೂದನ್, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಜಯರಾಮ್, ಮುಖಂಡರಾದ ರಂಗೇಗೌಡ, ಮಹೇಶ್, ರುದ್ರೇಶ್, ಡೇರಿ ನಂಜುಂಡೇಗೌಡ, ಅಣ್ಣೇಗೌಡ, ಉಮಾಮಹೇಶ್, ಶಿಕ್ಷಕ ಗೌರೀಶ್ ಇತರರಿದ್ದರು.