ಜಿಲ್ಲೆ

ವೈಯುಕ್ತಿಕ ಬದುಕಿನ ಜತೆಗೆ ಸಮಾಜಕ್ಕೂ ಕೊಡುಗೆ ನೀಡಿ

ಯಳಂದೂರು: ನಾವು ವೈಯಕ್ತಿಕವಾಗಿ ಚೆನ್ನಾಗಿ ಬದುಕಬೇಕು. ಆದರೆ ನಮ್ಮ ಜೀವನ ಇದಕ್ಕಾಗಿಯೇ ಮೀಸಲಿಡದೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ದಮಲ್ಲಪ್ಪ ಕರೆ ನೀಡಿದರು.

ಪಟ್ಟಣದ ಕಾರಾಪುರ ವಿರಕ್ತಮಠದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬಸವ ಶ್ರೀ ಪತ್ತಿನ ಸಹಕಾರ ಸಂಘಗಳ 2024-25 ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಆಡಂಬರಕ್ಕಾಗಿ ಅನೇಕರು ಆಸ್ತಿಗಳನ್ನು ಮಾರಿಕೊಳ್ಳುತ್ತಿದ್ದಾರೆ. ಓದುವ ಸಂಖ್ಯೆ ಕಡಿಮೆಯಾಗುತ್ತಿದೆ. ಹೊಸ ಕೌಶಲ, ತರಬೇತಿಗಳಿಗೆ ನಮ್ಮ ಮಕ್ಕಳು ಇನ್ನು ಒಗ್ಗಿಕೊಂಡಿಲ್ಲ. ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಬೇಕು. ಶರಣರ ತತ್ವಗಳನ್ನು ತಿಳಿಸುವ ಕೆಲಸವನ್ನು ಮಾಡಬೇಕು, ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸುವ ಕೆಲಸವನ್ನು ಮಾಡಬೇಕು. ಯುವಕರು ಕಾಯಕ ತತ್ವಕ್ಕೆ ಮಹತ್ವ ನೀಡಬೇಕು. ಇಂದು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿದ್ದು, ಕುಟುಂಬಗಳು ಸಣ್ಣದಾಗಿ ವಯೋವೃದ್ಧರು ದಿಕ್ಕಾಪಾಲಾಗಿದ್ದಾರೆ. ಈ ಸಂಸ್ಕೃತಿ ನಿಲ್ಲಬೇಕು.

ನಮ್ಮ ಸಹಕಾರ ಸಂಘ ಜಿಲ್ಲೆಯಲ್ಲಿ 1 ಸಾವಿರ ಸದಸ್ಯರನ್ನು ಹೊಂದಿದೆ. 16 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಸಂಘದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪ್ರತಿಯೊಬ್ಬರೂ ಶ್ರಮ ವಹಿಸಿ ಕೆಲಸ ಮಾಡಬೇಕು. ನಿವೃತ್ತ ಸರ್ಕಾರಿ ನೌಕರರು ಪತ್ತಿನ ಸಂಘದ ಮೇಲೆ ವಿಶ್ವಾಸವಿಟ್ಟು ಹಣವನ್ನು ಠೇವಣಿ ಇಡುವ ಮೂಲಕ ಸಂಘದ ಪ್ರಗತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರಾಪುರ ವಿರಕ್ತ ಮಠದ ಬಸವರಾಜಸ್ವಾಮಿ ಒಡೆಯರ್ ಮಾತನಾಡಿ, ಸಹಕಾರ ಸಂಘದಲ್ಲಿರುವ ಸದಸ್ಯರ ಒಗ್ಗಟ್ಟು ಸಂಘದ ವೃದ್ಧಿಗೆ ಸಹಕಾರಿಯಾಗಿದೆ. 21 ವರ್ಷಗಳನ್ನು ಪೂರೈಸಿ ಅನೇಕ ಸಮಾಜಪರ ಕೆಲಸಗಳನ್ನು ಮಾಡಿರುವುದು ಸಂಘದ ಶಿಸ್ತಿಗೆ ಸಾಕ್ಷಿಯಾಗಿದೆ. ಇದನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯುವ ಕೆಲಸಗಳನ್ನು ಈಗಿರುವ ಪದಾಧಿಕಾರಿಗಳು ಮುಂದುವರೆಸಬೇಕು ಎಂದು ಸಲಹೆ ನೀಡಿದರು.

ಗೌಡಹಳ್ಳಿ ಮಠದ ತೋಂಟದಾರ್ಯಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖೋಖೋ ಕ್ರೀಡಾಪಟು ಚೈತ್ರಾ ಕುರುಬೂರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗುರುಸಿದ್ದಪ್ಪ, ಕೊಳ್ಳೇಗಾಲ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ನಂಜುಂಡಸ್ವಾಮಿ, ಕೊಳ್ಳೇಗಾಲ ಅಧ್ಯಕ್ಷ ನಂದೀಶ್, ಕಾರ್ಯದರ್ಶಿ ಮಲ್ಲಪ್ಪ, ಖಜಾಂಚಿ ಕೆ.ಮಹದೇವಪ್ಪ, ಎಂ.ರವಿ, ಮಲ್ಲಣ್ಣ, ಲೋಕೇಶ್ ಮೂರ್ತಿ, ಸಿದ್ದರಾಜು, ಬಸವರಾಜು ಸೇರಿದಂತೆ ಅನೇಕರು ಇದ್ದರು.