ಸಿದ್ದಾಪುರ: ಪ್ರಕೃತಿ ಎನ್ನುವುದು ನಮಗೆ ದೊರೆತ ಬಳುವಳಿಯಲ್ಲ. ನಾವು ಮುಂದಿನ ಪೀಳಿಗೆಯಿಂದ ಪಡೆದ ಸಾಲ. ಆ ಋಣ ತೀರಿಸುವ ನಿಟ್ಟಿನಲ್ಲಿ ಪಂಡಿತ ದೀನದಯಾಳ ಟ್ರಸ್ಟ್‌ನಿಂದ ಗಾಂಧಿ ಜಯಂತಿಯಂದು ಸ್ವಚ್ಛತೆಗಾಗಿ ಒಂದು ಹೆಜ್ಜೆ ಎನ್ನುವ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದ ರಾಘವೇಂದ್ರ ಮಠದ ಸಭಾಭವನದಲ್ಲಿ ಶಿರಸಿಯ ಪಂ.ದೀನದಯಾಳ ಟ್ರಸ್ಟ್ ನೇತೃತ್ವದಲ್ಲಿ ಸ್ವಚ್ಛತೆಗಾಗಿ ಒಂದು ಹೆಜ್ಜೆ ಕಾರ್ಯಕ್ರಮದ ಕುರಿತು ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಕುರಿತಂತೆ ಗ್ರಾಪಂ ವ್ಯಾಪ್ತಿಯ ಎಲ್ಲ ಸಂಘ, ಸಂಸ್ಥೆಗಳ ಪ್ರಮುಖರ ಸಭೆ ಕರೆದು ಕಾರ್ಯಕ್ರಮ ರೂಪಿಸುವುದು, ಕಸ ಸಂಗ್ರಹಣೆ, ಅದರ ವಿಲೇವಾರಿಯ ಕಾರ್ಯಗಳ ಬಗ್ಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಎಲ್ಲರ ಜವಾಬ್ದಾರಿ. ಇದೊಂದು ಸ್ವಪ್ರೇರಣೆಯಿಂದ ಪಾಲ್ಗೊಳ್ಳುವ ಕಾರ್ಯಕ್ರಮ. ಇದು ಕೇವಲ ಬಿಜೆಪಿಯ ಅಭಿಯಾನವಲ್ಲ. ಸರ್ಕಾರ, ಜನಪ್ರತಿನಿಧಿಗಳು, ಎಲ್ಲ ಸಂಘ, ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಬಿಜೆಪಿಮಂಡಲ ಅಧ್ಯಕ್ಷ ಮಾರುತಿ ನಾಯ್ಕ, ಪ್ರಮುಖರಾದ ರವಿ ಹೆಗಡೆ ಹೂವಿನಮನೆ ಮಾತನಾಡಿದರು. ಈಶ್ವರ ನಾಯ್ಕ ಮನಮನೆ, ತಿಮ್ಮಪ್ಪ ಎಂ.ಕೆ., ಗುರುರಾಜ ಶಾನಭಾಗ, ನಂದನ ಬೋರ‌್ಕರ, ತೋಟಪ್ಪ ನಾಯ್ಕ, ಕೆ.ಆರ್. ವಿನಾಯಕ, ವಿಜೇತ ಗೌಡರ್ ಇತರರಿದ್ದರು. ಮಹಾಬಲೇಶ್ವರ ಹೆಗಡೆ ಕಾನಸೂರು ಸ್ವಾಗತಿಸಿದರು. ಆದರ್ಶ ಪೈ ವಂದಿಸಿದರು.