ಜಮಖಂಡಿ ತಾಲ್ಲೂಕು ಕಾನೂನು ಸೇವಾ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆಯನ್ನು ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಉದ್ಘಾಟಿಸಿದರು. ಡಾ.ಟಿ.ಪಿ. ಗಿರಡ್ಡಿ, ರಾಜೇಂದ್ರ ಕರೋಶಿ, ರೋಷಣಿ ವರ್ಣೆಕರ ಇದ್ದಾರೆ. 
ಜಿಲ್ಲೆ

ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿ

ಜಮಖಂಡಿ: ಸ್ವಾಮಿ ವಿವೇಕಾನಂದರು ಯುವಕರ ಮೇಲೆ ಇಟ್ಟಿದ್ದ ನಂಬಿಕೆ ಹುಸಿಗೊಳಿಸದೆ, ದೇಹಬಲ, ಮನೋಬಲ ಹಾಗೂ ಆತ್ಮಬಲ ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಸಾಯಿ ನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸುಸ್ಥಿರ ಭವಿಷ್ಯಕ್ಕಾಗಿ ಯುವಕರು ಸ್ಥಿತಿತಾಪಕತ್ವ ಮತ್ತು ಜವಾಬ್ದಾರಿಯಿಂದ ದೇಶವನ್ನು ರೂಪಿಸುವುದು ರಾಷ್ಟ್ರೀಯ ಯುವ ದಿನಾಚರಣೆಯ ಈ ವರ್ಷದ ಘೋಷವಾಕ್ಯವಾಗಿದೆ ಎಂದರು.

ವಕೀಲ ರಾಜೇಂದ್ರ ಕರೋಶಿ ಮಾತನಾಡಿ, ಅಮೆರಿಕಾದ ಚಿಕಾಗೊದಲ್ಲಿ ನಡೆದಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಜಗತ್ತಿನಾದ್ಯಂತ ಸಂಚಲನ ಮೂಡಿಸಿತ್ತು. ಸ್ವಾಮಿ ವಿವೇಕಾನಂದರು ಶ್ರೇಷ್ಠ ಸನ್ಯಾಸಿ ಹಾಗೂ ಪುರುಷ ಸಿಂಹವಾಗಿದ್ದರು ಎಂದರು.

ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಮಾತನಾಡಿ, ಸಾಮಾಜಿಕ, ರಾಜಕೀಯ ಹಾಗೂ ಆಧ್ಯಾತ್ಮಿಕ ಬದಲಾವಣೆಗಳನ್ನು ತರಬಲ್ಲ ಸಾಮರ್ಥ್ಯ ಯುವಕರಲ್ಲಿದೆ. ಅಂತಹ ಯುವಕರ ಶಕ್ತಿ ಸಾಮರ್ಥ್ಯ ಗುರುತಿಸಿ ಸ್ಫೂರ್ತಿ ತುಂಬುವುದು ಯುವ ದಿನಾಚರಣೆಯ ಉದ್ದೇಶವಾಗಿದೆ ಎಂದರು.

ಸಾಯಿ ನಿಕೇತನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯವರ್ಷಿಣಿ ವರ್ಣೆಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಉಪನ್ಯಾಸಕಿ ಮೈತ್ರಾ ತಳವಾರ ನಿರ್ವಹಿಸಿದರು.