ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸಿದರು. ಲೋಕೇಶ್, ಶ್ರೀನಿವಾಸ್, ನಾಗರತ್ನಾ, ಕೃಷ್ಣಪ್ಪ, ರಾಜಶೇಖರ್, ನೂರುಲ್ಲಾ, ಶಿವಸ್ವಾಮಿ, ಚೇತನ್ ಕುಮಾರ್, ದೊಡ್ಡಯ್ಯ ಇದ್ದರು. 
ಜಿಲ್ಲೆ

ದೇಶಕ್ಕಾಗಿ ಏನಾದರೊಂದು ಕೊಡುಗೆ ನೀಡಿ

ಮಳವಳ್ಳಿ : ಪಟ್ಟಣದಲ್ಲಿ ತಾಲೂಕು ಆಡಳಿತ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಕಚೇರಿ ಮತ್ತು ಶಾಲಾ-ಕಾಲೇಜುಗಳಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಜರುಗಿದವು.
ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಇಂದು ದೇಶವಾಸಿಗಳು ನೆಮ್ಮದಿಯ ಜೀವನ ನಡೆಸುತ್ತಿರಲು ಕಾರಣಕರ್ತರಾಗಿರುವ ಹೋರಾಟಗಾರರ ಸ್ಮರಿಸುವ ಕೆಲಸವಾಗಬೇಕಿದೆ. ಸ್ವಾತಂತ್ರ್ಯ ನಂತರ ನಮ್ಮ ಬದುಕು, ಜೀವನ, ದೇಶದ ಆಡಳಿತ ಹೇಗಿರಬೇಕೆಂದು ಸಂವಿಧಾನದ ಮೂಲಕ ಕಟ್ಟಿಕೊಟ್ಟ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೊಡುಗೆಯೂ ಅಪಾರ. 35 ಕೋಟಿ ಇದ್ದಂತಹ ಜನಸಂಖ್ಯೆ ಪ್ರಸ್ತುತ 140 ಕೋಟಿ ತಲುಪಿದ್ದರೂ ಎಲ್ಲರಿಗೂ ಆಹಾರ ಭದ್ರತೆಯನ್ನು ನೀಡುತ್ತಾ ಕೃಷಿಕ್ಷೇತ್ರದ ಅಭಿವೃದ್ಧಿಯ ಮೂಲಕ ಸರ್ಕಾರಗಳು ಉತ್ತೇಜನ ನೀಡಿದರ ಪರಿಣಾಮ ವಿಶ್ವವೇ ನಿಬ್ಬೆರಗಾಗಿ ನಮ್ಮತ್ತ ನೋಡುವಂತಾಗಿದೆ. ಹಲವು ಧರ್ಮ, ವೈವಿಧ್ಯತೆಯ ಆಚರಣೆ ನಡುವೆ ಸಹಬಾಳ್ವೆ ನಡೆಸುತ್ತಿರುವ ನಮ್ಮ ದೇಶದಲ್ಲಿ ಜನ್ಮ ತಳೆದಿರುವ ಪ್ರತಿಯೊಬ್ಬ ನಾಗರಿಕನೂ ತಮ್ಮ ಜೀವಿತಾವಧಿಯಲ್ಲಿ ದೇಶಕ್ಕಾಗಿ ಏನಾದರೊಂದು ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ತಹಸೀಲ್ದಾರ್ ಲೋಕೇಶ್ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿ ಸ್ವಾತಂತ್ರೊೃೀತ್ಸವದ ಸಂದೇಶ ನೀಡಿದರು. ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ಡಿವೈಎಸ್‌ಪಿ ಕೃಷ್ಣಪ್ಪ, ಸದಸ್ಯರಾದ ರಾಜಶೇಖರ್, ನೂರುಲ್ಲ, ಶಿವಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿ.ರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಪಟ್ಟಣದ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದರು.

ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳು ನೆರವೇರಿದವು. ಮಕ್ಕಳು ವಿವಿಧ ಹೋರಾಟಗಾರರ ವೇಷಭೂಷಣ ತೊಟ್ಟು ಸಂಭ್ರಮಿಸಿದರು.