ಜಿಲ್ಲೆ

ಕೆಲಸ ಮಾಡದೆ ಬಿಲ್ ಕೇಳುವ ಗುತ್ತಿಗೆದಾರರಿಗೆ ಹಣ ಸಿಗಲ್ಲ

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರೇ ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಭವಿಷ್ಯದ ಯೋಜನೆಗಳ ಬಗ್ಗೆ ಸ್ಪಷ್ಟನೆ ಇಲ್ಲವಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡರು.

ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಹಾಡಿ ಹೊಗಳಿದರು.

ಯುಕೆಪಿ ಹಂತ-3 ಬಗ್ಗೆ ನಿಮ್ಮ ಬದ್ಧತೆ ಏನು? ಆಲಮಟ್ಟಿಗೆ ಬಾಗಿನ ಸಲ್ಲಿಸಲು ಸಿಎಂ ಬಂದಾಗ ಏನಾದರೂ ಸಿಹಿ ಸುದ್ದಿ ಕೊಡಿಸುತ್ತೀರಾ ಎಂದು ತೂರಿ ಬಂದ ಪ್ರಶ್ನೆಗೆ ನಿಖರ ಉತ್ತರ ಕೊಡಲು ತಡಬಡಿಸಿದ ಸಚಿವರು, ನಮ್ಮ ಸರ್ಕಾರ ಎಂತಹ ಅದ್ಭುತ ಕಾರ್ಯಕ್ರಮ ಕೊಟ್ಟಿದೆ. ಕಟ್ಟ ಕಡೆಯ ಮನುಷ್ಯ ಹೊಟ್ಟೆ ತುಂಬ ಊಟ(10 ಕೆಜಿ ಅಕ್ಕಿ) ಮಾಡಬೇಕು. ಎಲ್ಲರೂ ಬೆಳಕಿನಲ್ಲಿ (ಗೃಹಜ್ಯೋತಿ) ಇರಬೇಕು. ಎಲ್ಲಿಗಾದರೂ ಹೋಗಲು ಹಣದ ತೊಂದರೆ ಇರಬಾರದು(ಶಕ್ತಿ ಯೋಜನೆ). ಇವೆಲ್ಲ ಮಾಡಿದ್ದೇವೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಎಷ್ಟು? ಬಿಟಿಡಿಎ, ಆರ್ ಆ್ಯಂಡ್ ಆರ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಯಾವಾಗ ಎನ್ನುವ ಪ್ರಶ್ನೆಗೆ ಮಾತ್ರ ಹಾರಿಕೆ ಉತ್ತರ ನೀಡಿ ಜಾರಿಕೊಂಡರು.

1999ರಲ್ಲಿ ನಾನೇ ಉಸ್ತುವಾರಿ ಇದ್ದಾಗ ಆಲಮಟ್ಟಿ ಜಲಾಶಯ ಗೇಟ್ ಬಂದ್ ಮಾಡಿ ನೀರು ನಿಲ್ಲಿಸಿದ್ದೆ. ಎಸ್.ಎಂ.ಕೃಷ್ಣ ಸರ್ಕಾರದ ಇಡೀ ಕ್ಯಾಬಿನೇಟ್ ಇಲ್ಲಿಗೆ ಕರೆದುಕೊಂಡು ಬಂದು ಅನೇಕ ಬೇಡಿಕೆ ಈಡೇರಿಸಿದ್ದು. ಯೋಜನೆಗೆ ಯಾವ ಸರ್ಕಾರ ಏನೆಲ್ಲ ಮಾಡಿದೆ ಎಂದು ಲಿಸ್ಟ್ ನೋಡಿ ಎಂದರು.

ಶಕ್ತಿ ಯೋಜನೆ ಜಾರಿ ಬಳಿಕ ಜಿಲ್ಲೆಯಲ್ಲಿ ಒಂದು ಒಂದು ಬಸ್ ಸಂಖ್ಯೆ ಹೆಚ್ಚಾಗಿಲ್ಲ. ವಿದ್ಯಾರ್ಥಿಗಳು ನಿಲ್ದಾಣಗಳಲ್ಲಿ ಪರದಾಡುವ ಸ್ಥಿತಿ ಬಗ್ಗೆ ಗಮನ ಸೆಳೆದಾಗಲೂ ಗರಂ ಆದ ಸಚಿವರು, ಏಕವಚನದಲ್ಲೇ ಉತ್ತರ ನೀಡಿದರು.

ಹೊಸ ಯೋಜನೆ ಬಂದಾಗ ಅಲ್ವಸ್ವಲ್ಪ ತೊಂದರೆ ಆಗುತ್ತದೆ. ಅದನ್ನು ಬಗೆಹರಿಸುತ್ತೇವೆ. ಚುನಾವಣೆ ಆಗಿಯೇ 3 ತಿಂಗಳು ಆಗಿದೆ. ಆರಂಭದಲ್ಲಿ ಯೋಜನೆ ಘೋಷಣೆ ಮಾಡಿ ಮಾಡಿ ಎಂದರು. ಈಗ ಜಾರಿ ಮಾಡಿದ್ದೇವಲ್ಲ. ತೊಂದರೆ ಸರಿಪಡಿಸುತ್ತೇವೆ ಎಂದರು.

ಮುಂದಿನ ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಪತನ ಆಗುತ್ತದೆ ಎಂದು ಭವಿಷ್ಯ ನುಡಿದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ವ್ಯಂಗ್ಯ ಮಾಡಿದ ಸಚಿವ ತಿಮ್ಮಾಪುರ, ಪಾಪ ಯತ್ನಾಳ ಏನೋ ಆಗಬೇಕು ಅಂತಾನೆ. ವಿರೋಧ ಪಕ್ಷದ ನಾಯಕ ಮಾಡಿದರೆ ಉತ್ತಮ ಆಗುತ್ತದೆ. ಅಲ್ಲಿ ಕಷ್ಟ ಪಟ್ಟು ಏನೇನೋ ಮಾತನಾಡುತ್ತಾರೆ. ವಿಪಕ್ಷ ನಾಯಕ ಸ್ಥಾನ ಕೊಟ್ಟರೆ ಇನ್ನಷ್ಟು ಮಾತನಾಡಲು ಅನುಕೂಲ ಆಗಲಿ ಎಂದು ಚುಚ್ಚಿದರು.

ಕಾಂಗ್ರೆಸ್‌ನಲ್ಲಿ ಶಾಸಕರು ಸಂತೋಷ ಇಲ್ಲ ಎನ್ನುವ ಯತ್ನಾಳ ಹೇಳಿಕೆಗೂ ತಿರುಗೇಟು ನೀಡಿದ ಸಚಿವರು, ಪಾಪ ಗೊತ್ತಿಲ್ಲ, ಅವರು ಬಿಜೆಪಿ ಶಾಸಕರ ಬಗ್ಗೆ ಹೇಳಿರಬೇಕು. ಅವರ ಪಕ್ಷದಲ್ಲಿ ಹಿಂದೆ ಎಂಎಲ್ಎಗಳೆಲ್ಲ ಗಲಾಟೆ ಮಾಡಿದ್ದರಲ್ಲ, ಅದನ್ನು ಹೇಳುತ್ತಿರಬಹುದು. ಅವರು ನಮ್ಮ ಶಾಸಕರ ಬಗ್ಗೆ ಹೇಳಿಲ್ಲ. ನಮ್ಮಲ್ಲಿ ಇನ್ನರ್ ಪ್ರಜಾಪ್ರಭುತ್ವ ಇದೆ. ಶಾಸಕರು ಹೇಳುತ್ತಾರೆ, ಕೇಳುತ್ತಾರೆ, ಮನವಿ ಮಾಡುತ್ತಾರೆ. ಚರ್ಚೆ ಮಾಡಿ ಸರಿ ಮಾಡುತ್ತೇವೆ. ಜನರು ಅವರನ್ನು(ಬಿಜೆಪಿ) ಬೇಡ ಎಂದು ಕೆಳಗೆ ಇಳಿಸಿದ್ದಾರೆ. ಆದರೂ ಇನ್ನೂ ಅಧಿಕಾರದ ಹಪಾಹಪಿ. ಅಡ್ಡದಾರಿ, ಉದ್ದದಾರಿ ಹಿಡಿಯುವುದು, ಶಾಸಕರನ್ನು ಖರೀದಿ ಮಾಡುವುದು ಎನ್ನುವ ಹುಚ್ಚು ಸಾಹಸಕ್ಕೆ ಕೈಹಾಕುತ್ತಿದ್ದಾರೆ. ಆದರೆ, ಈ ಸಲ ಅದು ನಡೆಯಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಬಿಜೆಪಿಯವರಂತೆ 600 ಭರವಸೆ ನೀಡಿ ಈಡೇರಿಸದೆ ಸುಳ್ಳು ಹೇಳಿಲ್ಲ. ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದ ಸಚಿವರು, ಈ ವರ್ಷ ಜಿಲ್ಲೆಯಲ್ಲಿ ರನ್ನ ಉತ್ಸವ, ಚಾಲುಕ್ಯ ಉತ್ಸವಕ್ಕೂ ಗ್ಯಾರಂಟಿ ನೀಡಿದರು.