ಜಿಲ್ಲೆ

ಹಳೆ ಬಿಲ್‌ ಕೊಡಿ ಮತ್ತೆ ಹೊಸ ಟೆಂಡರ್‌ ಕರೆಯಿರಿ

Uttara Kannada - Subash Hegde

ಕಾರವಾರ: ಹಿಂದಿನ ಬಿಲ್ ಪಾವತಿ ಮಾಡದೇ ನಗರಸಭೆಯಿಂದ ಹೊಸ ಟೆಂಡರ್ ಕರೆಯದಂತೆ ಕಾರವಾರ ತಾಲೂಕು ನೋಂದಾಯಿತ ಗುತ್ತಿಗೆದಾರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಅವರನ್ನು ಮಂಗಳವಾರ ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಸಮಸ್ಯೆ ವಿವರಿಸಿದರು. ಕಾರವಾರ ನಗರಸಭೆಯಿಂದ 2021 ನೇ ಸಾಲಿನಿಂದ 2023-24 ನೇ ಸಾಲಿನವರೆಗೆ ನಡೆಸಿದ ವಿವಿಧ ಕಾಮಗಾರಿಗಳ ಸುಮಾರು 10 ಕೋಟಿ ರೂ.ಗಳ ಬಿಲ್ ಪಾವತಿ ಗುತ್ತಿಗೆದಾರರಿಗೆ ಬಾಕಿ ಇದೆ. ಈ ಸಂಬAಧ ವರ್ಷಗಳ ಹಿಂದೆ ಸಭೆ ನಡೆಸಿದ್ದ ಆಗಿನ ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಅವರು, ಗುತ್ತಿಗೆದಾರರ ಹಿಂದಿನ ಬಾಕಿ ಪಾವತಿಯಾದ ನಂತರವೇ ಹೊಸ ಟೆಂಡರ್ ಕರೆಯುವುದಾಗಿ ಭರವಸೆ ನೀಡಿದ್ದರು. ನಂತರ ಶಾಸಕ ಸತೀಶ ಸೈಲ್ ಅವರೂ ಸಭೆ ನಡೆಸಿ, ಗುತ್ತಿಗೆದಾರರ ಹಳೆಯ ಬಿಲ್ ಪಾವತಿ ಮಾಡುವಂತೆ ಸೂಚಿಸಿದ್ದರು. ನಂತರವೂ ಕೆಲವು ತುರ್ತು ಕಾಮಗಾರಿಗಳ ಟೆಂಡರ್ ಕರೆದರೂ ನಾವು ಆಕ್ಷೇಪಿಸಿರಲಿಲ್ಲ.

ಆದರೆ, ಈಗ ನಗರಸಭೆ ಸ್ವಂತ ನಿಧಿಯಿಂದ ವಿವಿಧ ಕಾಮಗಾರಿಗಳ ಟೆಂಡರ್ ಕರೆದಿದೆ. ಇನ್ನಷ್ಟು ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಪೌರಾಯುಕ್ತರನ್ನು ಕೇಳಿದರೆ, ಹಿಂದಿನ ಪೌರಾಯುಕ್ತರ ಅವಽಯ ಬಾಕಿಗಳು ನಮಗೆ ಸಂಬಂಧವಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಗುತ್ತಿಗೆ ಕೆಲಸ ಮಾಡಿದ್ದೇವೆ. ಬಿಲ್ ಪಾವತಿಯಾಗದ ಕಾರಣ ಬ್ಯಾಂಕ್ ಸಾಲ ತುಂಬಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗಳಿಗೆ ನೋಟಿಸ್ ಬರುತ್ತಿದೆ. ಗುತ್ತಿಗೆದಾರರು ಸಂಕಷ್ಟದಲ್ಲಿದ್ದು, ಹಳೆಯ ಬಿಲ್ ಪಾವತಿಯಾದ ನಂತರವೇ ಹೊಸ ಕಾಮಗಾರಿ ಪ್ರಾರಂಭಿಸಬೇಕು ಎಂದು ವಿನಂತಿಸಿದರು.

ಸಂಘದ ಅಧ್ಯಕ್ಷ ವಿಜಯ ಬಿಲಿಯೆ, ಪದಾಽಕಾರಿಗಳಾದ ಛತ್ರಪತಿ ಮಾಳ್ಸೇಕರ್, ಸತೀಶ ನಾಯ್ಕ, ರಮಾನಾಥ ನಾಯ್ಕ, ರವಿ ಕೇರಕರ್, ರೋಹಿದಾಸ ಕೊಠಾರಕರ್, ಮನೋಜ ನಾಯ್ಕ, ಉದಯ ನಾಯ್ಕ, ಕೃಷ್ಣಾನಂದ ನಾಯ್ಕ, ರಾಜು ವಡ್ಡರ್, ಶಶಿಕಾಂತ ನಾಯ್ಕ, ರಾಜೇಂದ್ರ ಅಂಚೆಕರ್, ಗುಂಡಪ್ಪ ಇದ್ದರು.