ಜಿಲ್ಲೆ

ಗಾರೆ ಕೆಲಸಗಾರರಿಂದ ಗುತ್ತಿಗೆದಾರನ ಹತ್ಯೆ

ಶಿವಶಂಕರ್ ಎಂ. ಹೆಬ್ಬಳ್ಳ

ಅರಸೀಕೆರೆ : ಗಾರೆ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಇಬ್ಬರು ದುಷ್ಕರ್ಮಿಗಳು ಕಟ್ಟಡ ಗುತ್ತಿಗೆದಾರನನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಗುತ್ತಿಗೆದಾರ ವಿಜಯಕುಮಾರ್(46) ಕೊಲೆಯಾದವರು. ಗಾರೆ ಕೆಲಸ ಮಾಡಲು ಬಿಹಾರದಿಂದ ಬಂದಿದ್ದ ವಿಕ್ರಂ ಹಾಗೂ ಸಚಿನ್ ಆರೋಪಿಗಳು. ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಖಬರ್‌ಸ್ತಾನದ ಬಳಿ ಕಟ್ಟಡದಲ್ಲಿ ಶುಕ್ರವಾರ ತಡರಾತ್ರಿ ಕೃತ್ಯ ನಡೆದಿದೆ.

ಇಬ್ಬರೂ ಕೆಲಸ ಮುಗಿದ ಬಳಿಕ ಸಣ್ಣ ಗಲಾಟೆ ಮಾಡಿಕೊಂಡಂತೆ ನಟಿಸಿ ಗುತ್ತಿಗೆದಾರನನ್ನು ಸ್ಥಳಕ್ಕೆ ಬರುವಂತೆ ಕರೆ ಮಾಡಿ ಹತ್ಯೆಗೆ ಸಂಚು ರೂಪಿಸಿದ್ದರು. ವಾಸ್ತವ ಅರಿಯದ ವಿಜಯಕುಮಾರ್ ಸ್ಥಳಕ್ಕೆ ದೌಡಾಯಿಸಿದ ವೇಳೆ ಹಿಂಬದಿಯಿಂದ ತಲೆಗೆ ರಾಡ್‌ನಿಂದ ಬಡಿದಿದ್ದಾರೆ. ಇದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ದುಷ್ಕರ್ಮಿಗಳಿಬ್ಬರು ವಿಜಯಕುಮಾರ್ ಕುತ್ತಿಗೆಯಲ್ಲಿದ್ದ ಸರ ದೋಚಿದ್ದಾರೆ. ಬೆರಳಲ್ಲಿದ್ದ ಉಂಗುರ ಬಾರದ ಹಿನ್ನೆಲೆಯಲ್ಲಿ ಉಂಗುರ ಕತ್ತರಿಸಿ ತೆಗೆದಿದ್ದಾರೆ. ಚಿನ್ನಾಭರಣ, ಮೊಬೈಲ್ ಸಮೇತ ಪರಾರಿಯಾಗಿದ್ದಾರೆ. ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಖಾಕಿ ಬಲೆ ಬೀಸಿದ್ದಾರೆ.