ಮೈಸೂರು: ನಿರಂತರ ಫೌಂಡೇಷನ್ ವತಿಯಿಂದ ಡಿ.21 ರಿಂದ 25ರವರೆಗೆ ನಗರದ ಕಲಾಮಂದಿರದ ಆವರಣದಲ್ಲಿನ ಕಿರು ರಂಗಮಂದಿರದಲ್ಲಿ ನಿರಂತರ ರಂಗ ಉತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಕೆ.ಎಸ್.ಪ್ರಸಾದ್ ತಿಳಿಸಿದರು.
ಡಿ.21ರಂದು ಸಂಜೆ 5.30ಕ್ಕೆ ಸಿದ್ದಿ ಡಮಾಮಿ ಜನಪದ ನೃತ್ಯದೊಡನೆ ರಂಗ ಉತ್ಸವ ಆರಂಭವಾಗಿ, ಸಂಜೆ 6.15ಕ್ಕೆ ಉದ್ಘಾಟನೆಗೊಳ್ಳಲಿದೆ. ಬಂದರು ಮತ್ತು ಒಳನಾಡು ಜಲ ಸಾರಿಗೆ ನಿರ್ದೇಶನಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ ರಾಯಪುರ, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
7 ಗಂಟೆಗೆ ಬೆಂಗಳೂರಿನ ರಂಗರಥ ತಂಡದಿಂದ ‘ಕ್ರೌಂಚಗೀತಾ’ ನಾಟಕ ಪ್ರದರ್ಶನಗೊಳ್ಳಲಿದೆ. 22ರಂದು ಸಂಜೆ 7 ಗಂಟೆಗೆ ಅಭಿನಯ ತರಂಗ ತಂಡದಿಂದ ‘ಆತಂಕವಾದಿಯ ಆಕಸ್ಮಿಕ ಸಾವು’, 23ರಂದು ಸಂಜೆ 7 ಗಂಟೆಗೆ ನಿರ್ದಿಗಂತ ತಂಡದಿಂದ ‘ಪ್ರಾಜೆಕ್ಟ್ ಡಾರ್ಲಿಂಗ್’, 24ರಂದು ಸಂಜೆ 7 ಗಂಟೆಗೆ ನಿರಂತರ ತಂಡದಿಂದ ‘ಗೊರೂರು’ ನಾಟಕ ಪ್ರದರ್ಶನ ನಡೆಯಲಿದೆ.
25ರಂದು ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಿಧಾನಪರಿಷತ್ ಸದಸ್ಯೆ ಉಮಾಶ್ರೀ, ಜನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಭಾಗವಹಿಸಲಿದ್ದಾರೆ. ಬಳಿಕ 7 ಗಂಟೆಗೆ ಆಟಮಾಟ ತಂಡದಿಂದ ‘ನಾ ರಾಜಗುರು’ ನಾಟಕ ಪ್ರದರ್ಶನವಿರಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರು ರಂಗ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದರು. ಎಂ.ಎಂ.ಸುಗುಣ, ಶ್ರೀನಿವಾಸ್ ಇತರರಿದ್ದರು.