ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ನಿರಂತರ ಅಧ್ಯಯನ ಬಹಳ ಮುಖ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ವಿ.ಆರ್. ಶೈಲಜಾ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಆಯೋಜಿಸಿರುವ ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಶಿಬಿರದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಸ್ಪರ್ಧಾತ್ಮಕ ಪರೀಕ್ಷಾರ್ಥಿಯೂ ಇತರರಿಗಿಂತ ಭಿನ್ನವಾಗಿ ನಾವು ಹೇಗೆ ಮುಂದೆ ಬರಬೇಕು? ಹೇಗೆ ಸಫಲರಾಗಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಬೇಕು. ಶಿಸ್ತು, ಸಂಯಮ, ಕ್ರಮಬದ್ಧ ಅಧ್ಯಯನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಲವು ರೀತಿಯ ಸಿದ್ಧತೆಯನ್ನು ಬಹಳ ಶ್ರದ್ಧೆಯಿಂದ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತರಬೇತಿ ಶಿಬಿರದ ಪ್ರಯೋಜನ ಪಡೆದು ಯಶಸ್ವಿಯಾಗುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಪ್ರಾಪಂಚಿಕ ಜ್ಞಾನ ಬೆಳೆಸಿಕೊಳ್ಳಲು ಬದುಕಿನಲ್ಲಿ ಸಾಕಷ್ಟು ಪ್ರೌಢಿಮೆ ಅಗತ್ಯವಿದೆ. ಅಧ್ಯಯನ ಎಂದಿಗೂ ವ್ಯರ್ಥವಾಗುವುದಿಲ್ಲ, ಓದಿದ ವಿಚಾರಗಳು ಎಂದೆಂದೂ ನಮ್ಮನ್ನು ಪ್ರಬುದ್ಧಗೊಳಿಸುತ್ತವೆ. ಸರ್ಕಾರಿ, ಖಾಸಗಿ ಎಲ್ಲೆಡೆ ಉದ್ಯೋಗಕ್ಕಾಗಿ ಸಾಕಷ್ಟು ಅವಕಾಶಗಳಿವೆ. ಇದಕ್ಕೆ ಪೂರಕವಾಗಿ ಪ್ರಯತ್ನ ನಿರಂತರವಾಗಿರಲಿ ಎಂದು ಹೇಳಿದರು.
ಕರ್ನಾಟಕ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ಮಾತನಾಡಿ, ಪ್ರತಿ ವಿದ್ಯಾರ್ಥಿಯು ಶ್ರದ್ಧೆಯಿಂದ ಯೋಜನೆ ಹಾಕಿಕೊಂಡು ಅಧ್ಯಯನ ಮಾಡಬೇಕು ಎಂದರು.
ಮುಕ್ತ ವಿವಿ ಕುಲಸಚಿವ ಪ್ರೊ. ಕೆ .ಎಲ್.ಎನ್. ಮೂರ್ತಿ ಮಾತನಾಡಿ, ಸತತ ಅಧ್ಯಯನ ಮಾಡಿದರೆ ನೈಪುಣ್ಯತೆ ನಮ್ಮದಾಗುತ್ತದೆ. ಹಾಗಾಗಿ ಕಾಲಹರಣ ಮಾಡದೆ ಸಾಧನೆ ಹಾದಿಯಲ್ಲಿ ಮುನ್ನುಗ್ಗಿ ಎಂದರು. ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.