ಅಥಣಿ ಗ್ರಾಮೀಣ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ನಿರಂತರ ಅಧ್ಯಯನದೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ವಿಜಯಪುರ ಶಾರದಾ ವಿದ್ಯಾಪೀಠ ಕೋಚಿಂಗ್ ಸಂಸ್ಥೆ ಮುಖ್ಯಸ್ಥ ಮಂಜುನಾಥ ಉಪ್ಪಾರ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಈಚೆಗೆ ಶಾರದಾ ವಿದ್ಯಾಪೀಠ ಕೋಚಿಂಗ್ ಸಂಸ್ಥೆ ವಿಜಯಪುರ ಹಾಗೂ ಕಾಲೇಜು ಉದ್ಯೋಗ ಭರವಸೆ ಕೋಶ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಪುಸ್ತಕಗಳನ್ನು ಸಂಗ್ರಹಿಸಿ ಶ್ರದ್ಧೆಯಿಂದ ನಿಗದಿತ ಕಾಲಾವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ ಗಳಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಪರಪ್ಪ ಮಗದುಮ್ಮ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಗುರಿಯೊಂದಿಗೆ ಸಾಗಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಕಾಲೇಜಿನಲ್ಲಿ ಬಿಎ ಮತ್ತು ಬಿಕಾಂನ 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಐಕ್ಯೂಎಸಿ ಸಂಚಾಲಕಿ ಪ್ರೋೆಸರ್ ಡಾ.ವಿದ್ಯಾಶ್ರೀ ಕೋಲಕಾರ, ದಯಾನಂದ ಎನ್.ಎಲ್., ಶ್ರೀಕಾಂತ ಜಾಧವ, ಮಂಜುನಾಥಸ್ವಾಮಿ ಎಚ್.ಎನ್., ಕಾಕಾಸಾಹೇಬ ಶೇಡಶಾಳ ಇತರರಿದ್ದರು.