ಜಿಲ್ಲೆ

ಅಲೆಮಾರಿ ಕುಟುಂಬಗಳ ಸೌಲಭ್ಯಕ್ಕೆ ನಿರಂತರ ಹೋರಾಟ

ತಿ.ನರಸೀಪುರ: ತಾಲೂಕಿನ ಅಲಸ್ತ್ರೀ ಕಟ್ಟೆಹುಂಡಿ ಗ್ರಾಮದ ಬಳಿಯಿರುವ ಪರಿಶಿಷ್ಟ ಜಾತಿಯ ಅಲೆಮಾರಿ ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನಿರಂತರ ಹೋರಾಟ ಮಾಡಲಿದೆ ಎಂದು ವಿಭಾಗೀಯ ಸಂಘಟನಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಹೇಳಿದರು.

ಹಲವು ವರ್ಷಗಳಿಂದಲೂ ಜೋಪಡಿ ಕಟ್ಟಿಕೊಂಡು ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಹೊಸ ಬಡಾವಣೆಗೆ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)ಯ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಮೂಲ ಸೌಕರ್ಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದರು.

ನಮ್ಮ ಸಂಘಟನೆಯ ಹೋರಾಟದ ಫಲವಾಗಿ ಬಡಾವಣೆಗೆ ವಿದ್ಯುತ್ ಸಂಪರ್ಕ, ಚರಂಡಿ ಮತ್ತು ಸಿಸಿ ರಸ್ತೆ ದೊರೆಯುವಂತಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗಾಗಿ ಟ್ಯಾಂಕ್ ನಿರ್ಮಾಣ ಮಾಡಲು ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿಮಾಡಲಾಗಿದೆ ಎಂದರು.

ಇಲ್ಲಿಯ ಜನರು ನೆಮ್ಮದಿಯ ಬದುಕಿಗೆ ಹಂಬಲಿಸುತ್ತಿದ್ದಾರೆ. ಸಮುದಾಯಗಳ ಜತೆ ಸಂಘಟನೆ ಇರುತ್ತದೆ. ಅವರ ಶ್ರೇಯೋಭಿವೃದ್ಧಿಗಾಗಿ, ಮೂಲ ಸೌಲಭ್ಯಗಳಿಗೋಸ್ಕರ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನಂತೆ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಅವರ ಬದುಕು ಹಸನುಗೊಳಿಸುವ ಮೂಲಕ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬೇಕಿದೆ ಎಂದರು.

ಈ ಒಂದು ಬಡಾವಣೆಯನ್ನು ಮಾದರಿ ಗ್ರಾಮವನ್ನಾಗಿ ಮಾರ್ಪಡಿಸುವುದೇ ನಮ್ಮ ಗುರಿ ಅದಕ್ಕಾಗಿ ಯಾವ ಹೋರಾಟಕ್ಕಾದರೂ ಸಿದ್ಧರಿದ್ದೇವೆ ಎಂದು ಬನ್ನಹಳ್ಳಿ ಸೋಮಣ್ಣ ಹೇಳಿದರು.

ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ಅಲೆಮಾರಿ ಸಮುದಾಯದ ಬಡಾವಣೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಬನ್ನಹಳ್ಳಿಸೋಮಣ್ಣನವರು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಮನವಿ ಮಾಡಿಕೊಂಡಿದ್ದಾರೆ. ಬಡಾವಣೆಯನ್ನು ಆದರ್ಶ ಬಡಾವಣೆಯನ್ನಾಗಿ ಮಾಡುವ ಉದ್ದೇಶದಿಂದ ಹೆಚ್ಚಿನ ಆಸಕ್ತಿವಹಿಸಿದ್ದಾರೆ ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ವಾಟಾಳ್ ನಾಗರಾಜ್, ಜಿಲ್ಲಾ ಸಮಿತಿ ಸದಸ್ಯ ಬಸವರಾಜ್ ಬನ್ನಹಳ್ಳಿ ಹಾಗೂ ನಿವಾಸಿಗಳಾದ ಶಂಕರ್, ಆನಂದ್ ಇತರರು ಇದ್ದರು.