ಜಿಲ್ಲೆ

ಸತತ ಮಳೆ..ಅಡಕೆಗೆ ಕೊಳೆ; ಆತಂಕದಲ್ಲಿ ಹಾನಗಲ್ಲ ಭಾಗದ ಬೆಳೆಗಾರರು

ಹಾನಗಲ್ಲ: ಮುಂಗಾರು ಹಂಗಾಮಿನಲ್ಲಿ ಸತತ ಮಳೆಗೆ ಅಡಕೆ ತೋಟಗಳು ಜೌಳು ಹಿಡಿದು ಕಾಯಿಗಳು ಉದುರುತ್ತಿವೆ. ಇದರಿಂದ ಪ್ರಸ್ತುತ ವರ್ಷದ ಫಸಲಿನ ಇಳುವರಿ ಕುಂಠಿತಗೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ತಾಲೂಕಿನ ಕೃಷಿ ಭೂಮಿಯನ್ನು ಅಡಕೆ ತೋಟಗಳು ವ್ಯಾಪಿಸಿವೆ. ಈ ಪ್ರದೇಶದ ಭೂಮಿ ತೋಟಗಾರಿಕೆ ಬೆಳೆಗಳಿಗೆ ಸೂಕ್ತವಾದದ್ದೆಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಎರಡು ವರ್ಷ ಮಳೆಯಿಲ್ಲದೇ ರೈತರು ತೋಟ ಉಳಿಸಿಕೊಳ್ಳುವಲ್ಲಿ ಹರಸಾಹಸ ಪಟ್ಟಿದ್ದಾರೆ. ಕೊಳವೆ ಬಾವಿಗಳಲ್ಲಿಯೂ ನೀರು ಖಾಲಿಯಾಗಿ ಕೆಲವು ಅಡಕೆ ತೋಟಗಳು ಒಣಗಿ ಹಾನಿಗೀಡಾಗಿವೆ. ಆದರೆ, ಈ ಬಾರಿ ಮಳೆ ಸಮೃದ್ಧವಾಗಿ ಸುರಿದಿದ್ದು, ಬಂಪರ್ ಫಸಲು ತೆಗೆಯಬೇಕೆಂಬ ಆಸೆ ಹೊಂದಿದ್ದ ರೈತರಿಗೆ ಅಡಕೆಗೆ ಕೊಳೆ ರೋಗ ತಗುಲಿದ್ದು, ನಿರಾಶೆ ಮೂಡಿಸಿದೆ.

ಸತತ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಅಡಕೆಗೆ ಜೌಳು ಹಿಡಿದಿದೆ. ಸತತವಾಗಿ ಸಣ್ಣದಾಗಿ ಮಳೆ ಸುರಿದಿದ್ದರಿಂದ ಅಡಕೆ ಕಾಯಿಗಳು ನೆಲ ಕಚ್ಚುತ್ತಿವೆ. ಅಡಕೆ ಕೊನೆಗಳಲ್ಲಿ ನೀರಿನ ಅಂಶ ಆರದೇ ಉಳಿದುಕೊಂಡು ಕೊಳೆ ರೋಗಕ್ಕೆ ತುತ್ತಾಗುವಂತೆ ಮಾಡಿದೆ. ಮುಂಗಾರು ಪೂರ್ವದಲ್ಲಿ ಉಷ್ಣಾಂಶ ಹೆಚ್ಚಾಗಿ ಅಡಕೆ ಹೂವು ಮತ್ತು ಹರಳುಗಳು ಉದುರಿದ್ದವು. ನಂತರದಲ್ಲಿ ಹಿಡಿದ ಕಾಯಿಗಳು ಕೊಳೆ ರೋಗಕ್ಕೆ ತುತ್ತಾಗಿ ನೆಲ ಕಚ್ಚುತ್ತಿವೆ. ನಿರ್ವಹಣೆಗೆ ಔಷಧ ಸಿಂಪರಣೆ ಮಾಡಲೂ ಮಳೆರಾಯ ಅವಕಾಶ ನೀಡಿಲ್ಲ. ಹೀಗಾಗಿ ರೋಗ ಉಲ್ಬಣಿಸುವ ಸಾಧ್ಯತೆ ಹೆಚ್ಚಿದ್ದು, ಆದಾಯಕ್ಕೂ ಕೊಕ್ಕೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ತಾಲೂಕಿನಲ್ಲಿ ಜುಲೈನಲ್ಲಿ ವಾಡಿಕೆ ಮಳೆ 299 ಮಿಮೀ ಆಗಿದ್ದರೂ, ಇಲ್ಲಿಯವರೆಗೆ (ಜು. 27) 437 ಮಿಮೀ ಸುರಿದಿದೆ. ತೋಟಗಳಲ್ಲಿ ಬಸಿಗಾಲುವೆ ತೋಡಿಸಿದ ಪ್ರದೇಶದಲ್ಲಿ ಅಡಕೆ ಉದುರುವಿಕೆ ಪ್ರಮಾಣ ಕಡಿಮೆಯಿದೆ. ಅಡಕೆಯಂಥ ವಾಣಿಜ್ಯ ಬೆಳೆ ಬೆಳೆಯಲು ಮುಂದಾಗಿರುವ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಬಾರಿ ಲಾಭ ಕಾಣುವ ಕನಸು ಕಮರಿದಂತಾಗಿದೆ.

ಜಿಟಿ-ಜಿಟಿ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಅಡಕೆ ಕಾಯಿ ಉದುರುತ್ತವೆ. ಅದಕ್ಕೆ ತೋಟದಲ್ಲಿ ಇಳುಕಲಿಗೆ ಅಡ್ಡಲಾಗಿ ಬಸಿಗಾಲುವೆ ನಿರ್ವಿುಸಬೇಕು. ನೀರು ನಿಲ್ಲದಂತೆ ಕಾಳಜಿ ವಹಿಸಬೇಕು. ಕೊಳೆ ರೋಗ ನಿಯಂತ್ರಣಕ್ಕಾಗಿ ಕೊನೆಗಳಿಗೆ ಬೋಡೋ ದ್ರಾವಣ ಸಿಂಪಡಿಸಬೇಕು ಅಥವಾ ಬ್ಲೈಟೆಕ್ಸ್ ಇಲ್ಲವೇ, ಬ್ಲೂಕಾಫರ್ ಔಷಧವನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂನಷ್ಟು ಬೆರೆಸಿ ಸಿಂಪಡಿಸಬೇಕು. ಅಡಕೆ ಕೊನೆಗಳಿಗೆ ಸ್ಪಿಂಡಲ್ ಬಗ್ ಎಂಬ ತಿಗಣಿಗಳು ರಸ ಹೀರುವುದರಿಂದಾಗಿಯೂ ಅಡಕೆ ಹರಳುಗಳು ಉದುರುತ್ತವೆ. ಇದರ ನಿರ್ವಹಣೆಗೆ ಡೈಮಿಥೋಯೇಟ್ ಅಥವಾ ಥಯೋಮೆಥಾಗಜಂ ಅಥವಾ ಮೊನೊಕ್ರೋಟೋಫಾಸ್ ಅಥವಾ ಲ್ಯಾಮೋಸೈಲೋಥ್ರಿನ್ ಯಾವುದಾದರೊಂದು ಕ್ರಿಮಿನಾಶಕವನ್ನು ನೀರಿನಲ್ಲಿ ಬೆರೆಸಿ ತಿಂಗಳಲ್ಲಿ ಎರಡು ಬಾರಿ ಸಿಂಪಡಿಸಬೇಕು. | ಮಂಜುನಾಥ ಬಣಕಾರ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ಹಾನಗಲ್ಲ ಮಳೆ ಹೀಗೆ ಮುಂದುವರಿದರೆ ಅಡಕೆ ಬೆಳೆಗೆ ಇನ್ನಷ್ಟು ಹಾನಿಯಾಗುವ ಅಪಾಯವಿದೆ. ಲಕ್ಷಾಂತರ ರೂ. ವ್ಯಯಿಸಿ ಉಳಿಸಿಕೊಂಡ ತೋಟದಲ್ಲಿ ಫಸಲು ಕೈಗೆ ಬರದಿದ್ದರೆ ಬೆಳೆಗಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ತೋಟಗಾರಿಕೆ ಇಲಾಖೆ ಈ ಕುರಿತು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. | ಬಾಳಾರಾಮ ಗುರ್ಲಹೊಸೂರ, ಅಡಕೆ ಬೆಳೆಗಾರ, ಹಾನಗಲ್ಲ