ಚಿಕ್ಕಮಗಳೂರು: ಜನ್ಮತಃ ಬಂದ ಶಾರೀರವನ್ನು ನಿರಂತರ ಅಭ್ಯಾಸದಿಂದ, ಕುಶಲತೆಯಿಂದ ಪರಿಶುದ್ಧಗೊಳಿಸುತ್ತಾ ಹೋಗಬೇಕು. ಸಂಗೀತ ಸಾಧನೆಯ ಹಾದಿಯಲ್ಲಿ ಶೃತಿ, ರಾಗ, ತಾಳ, ಲಯಗಳ ಧ್ಯಾನ ಬಲು ಮುಖ್ಯ ಎಂದು ಖ್ಯಾತ ಗಾಯಕಿ ರಶ್ಮಿ ಮಂಜುನಾಥ್ ತಿಳಿಸಿದರು.
ಅವರು ಅಮೇರಿಕಾದ ರಿಚ್ಮಂಡ್‌ನಲ್ಲಿ ನಡೆಯುವ ಈ ಸಾಲಿನ ಅಕ್ಕ ಸಮ್ಮೇಳನದಲ್ಲಿ ಹಾಡಲು ಆಯ್ಕೆಯಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕು ಕಳಸಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗೀತಗಾಯನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಮ್ಮ ಕೌಶಲ್ಯವು ನಮ್ಮೊಳಗಿನ ಶಕ್ತಿ. ಅದನ್ನು ನಿರಂತರವಾಗಿ ಉದ್ದೀಪನಗೊಳಿಸಿಕೊಂಡು ಸ್ವರ ಸಾಧನೆ ಮಾಡಿದರೆ ಯಶಸ್ಸು ಸಾಧ್ಯ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹೇಳಿದಂತೆ ಗುರುವಿನ ಮಾರ್ಗದರ್ಶನವಿದ್ದರೆ ಸಕಲವೂ ಸಾಧ್ಯ. ಕಾಲೇಜು ದಿನಗಳಲ್ಲಿಯೇ ಚಂಚಲವಾಗುವ ಮನಸ್ಸನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋದಾಗ ಗುರಿಯೂ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ, ರಶ್ಮಿ ಸಂಗೀತದ ವಿಚಾರದಲ್ಲಿ ನಿಜಕ್ಕೂ ಛಲ ಸಾಧಕಿ. ತಾನು ಕಲಿಯುವುದಲ್ಲದೆ ತನ್ನ ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸಿದಾಗ ಮಾತ್ರ ಗುರು ಜನ್ಮ ಸಾರ್ಥಕ ಎಂದರು.
ಸಾಂಸ್ಕೃತಿಕ ಕಾರ್ಯದರ್ಶಿ ಜಿ.ಬಿ.ಸುಕನ್ಯ ರಶ್ಮಿಯವರನ್ನು ಪರಿಚಯಿಸಿದರು. ಉಪನ್ಯಾಸಕರಾದ ರಾಜೇಶ್, ಪುಷ್ಪ, ಕಾವ್ಯ, ಭೂಮಿಕಾ, ಪ್ರಶಾಂತ್, ಸರಿತಾ, ಸುಗಂಧಕುಮಾರ್ ಉಪಸ್ಥಿತರಿದ್ದರು.