ಮಂಡ್ಯ: ಡ್ರಗ್ಸ್ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಶಾಲಾ ಮತ್ತು ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ತಾಲೂಕಿನ ಹೊಸಬೂದನೂರು ಗ್ರಾಮದ ಲೆಮೆನ್‌ಗ್ರಾಸ್ ಸಭಾಂಗಣದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆ, ರಸಾಯನಶಾಸ್ತ್ರಜ್ಞರು ಮತ್ತು ವಿತರಕರ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಔಷಧ ವ್ಯಾಪಾರಿಗಳಿಗೆ ವಿವಿಧ ಕಾಯ್ದೆ ಬಗ್ಗೆ ನಿರಂತರ ಕಲಿಕಾ ಕಾರ್ಯಕ್ರಮ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಡ್ರಗ್ಸ್ ಸೇವನೆ ಮಾಡುವ ಯುವಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವ ಸಮೂಹಕ್ಕೆ ಜಾಗೃತಿ ಮೂಡಿಸುವ ಕಾರ್ಯಾಗಾರ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸಮಾಜಕ್ಕೆ ಅಪಾಯ ತಂದೊಡ್ಡುವ ಮುನ್ಸೂಚನೆಯಾಗಿದೆ. ಕಾನೂನು ಎಷ್ಟೇ ಕಠಿಣವಾಗಿದ್ದರೂ ಇದನ್ನು ಸಂಪೂರ್ಣವಾಗಿ ತಡೆಯಲು ಆಗುತ್ತಿಲ್ಲ. ಪ್ರಕರಣ ದಾಖಲಿಸಿ ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಪೊಲೀಸರು ಕೂಡ ಮಾಡುತ್ತಿದ್ದೇವೆ. ನಗರದ ಪ್ರದೇಶಗಳಲ್ಲಿ ಮಾದಕ ವ್ಯಸನಿಗಳು ಹೆಚ್ಚಾಗಿ ಸಿಗುತ್ತಾರೆ. ಮಾದಕ ವ್ಯಸನವನ್ನು ಸಮರ್ಪಕವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಮೊಹಮದ್ ಜೋಹರ್ ಖಾಲಿದ್ ಮಾತನಾಡಿ, ವೈದ್ಯರ ಸಲಹಾ ಚೀಟಿ ಇಲ್ಲದಿದ್ದರೆ ಯಾರೂ ಮಾತ್ರೆ ಅಥವಾ ಔಷಧ ನೀಡಬಾರದು. ಇದನ್ನು ಪ್ರತಿಯೊಬ್ಬ ಮೆಡಿಕಲ್ ಮಾಲೀಕರು ಪಾಲಿಸಬೇಕು. ಏಕೆಂದರೆ ವೈದ್ಯರ ಚೀಟಿ ಇಲ್ಲದೇ ಇದ್ದರೆ, ಅದನ್ನೇ ಅಭ್ಯಾಸವಾಗಿ ಮಾಡಿಕೊಳ್ಳುವ ಸಂಭವ ಹೆಚ್ಚಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆ ಅಧ್ಯಕ್ಷ ಬಿ.ಲೋಕೇಶ್, ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆದುಕೊಂಡು ಹೋಗುವ ಹಲವು ಉದಾಹರಣೆಗಳು ನಮ್ಮ ಸುತ್ತಲೂ ಸಿಗುತ್ತಿವೆ. ಇದಕ್ಕೆ ಯುವಕರು ಮಾರು ಹೋಗಬಾರದು. ಒಳ್ಳೆಯ ಉದ್ದೇಶಗಳಿರುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಈ.ಗಂಗಾಧರೇಶ್ವರಸ್ವಾಮಿ, ಸಂಚಾರ ಠಾಣೆ ಇನ್‌ಪೆಕ್ಟರ್ ಕೆ.ಸಂತೋಷ್, ಸೆಂಟ್ರಲ್ ಠಾಣೆ ಇನ್ಸ್‌ಪೆಕ್ಟರ್ ಎಚ್.ಜಿ.ಮಂಜೇಗೌಡ, ಸಂಘದ ಮಾಧ್ಯಮ ಕಾರ್ಯದರ್ಶಿ ಮಂಜುನಾಥ್, ಡಾ.ಮಹಮದ್ ಸುಹೇಲ್, ಪ್ರಭಾಕರ್, ಸುರೇಶ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಔಷಧ ನಿಯಂತ್ರಣ ಇಲಾಖೆಯ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.