ಜಿಲ್ಲೆ

ಕರಾವಳಿಯಲ್ಲಿ ಮುಂದುವರಿದ ರೆಡ್ ಅಲರ್ಟ್

Mangaluru - Shravan Kumar Nala

ಮಂಗಳೂರು: ಕರಾವಳಿಯಲ್ಲಿ ಮತ್ತೆ ಮುಂಗಾರು ಚುರುಕಾಗಿದ್ದು, ಇಡೀ ದಿನ ಸಾಧಾರಣ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಸೆ.25ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಸೆ.26ರಂದು ಆರೆಂಜ್ ಅಲರ್ಟ್ ಹೇಳಿದೆ.

ಮಧ್ಯ ಬಂಗಾಳ ಕೊಲ್ಲಿಯ ಸುಳಿಗಾಳಿಯ ಚಲನೆಯಿಂದ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯ ಆಸುಪಾಸಿನಲ್ಲಿ ಮತ್ತು ಪೂರ್ವ-ಪಶ್ಚಿಮ ಬಂಗಾಳ ಕೊಲ್ಲಿಯ ಉತ್ತರ ಆಂಧ್ರ-ದಕ್ಷಿಣ ಒಡಿಶಾ ಕಡಲ ತೀರದ ಮೇಲೆ ಕಡಿಮೆ ಒತ್ತಡ ಪ್ರದೇಶ ರೂಪುಗೊಳ್ಳುವ ಸಾಧ್ಯತೆ. ಇದರ ನೇರ ಪರಿಣಾಮ ಕರ್ನಾಟಕ ಕರಾವಳಿ ಹಾಗೂ ಉತ್ತರ ಒಳನಾಡಿಗಾಗಿದ್ದು, ಮುಂದಿನ 2-3 ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

*ಜಿಲ್ಲೆಯಲ್ಲಿ ಉತ್ತಮ ಮಳೆ

ದ.ಕ.ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವದಿಂದಲೇ ಹಗುರದಿಂದ ಮಳೆಯಾಗಿದ್ದು, ಬೆಳಗ್ಗೆ 8 ಗಂಟೆ ವರೆಗೂ ಮುಂದುವರಿದಿತ್ತು. ಬಳಿಕ ಅಲ್ಲಲ್ಲಿ ಜಿಟಿಜಿಟಿ ಮಳೆಯಾಗಿದ್ದು, ಮಧ್ಯಾಹ್ನ ವೇಳೆಗೆ ಮಳೆ ತುಸು ಬಿಟ್ಟರೂ ಮಧ್ಯಾಹ್ನ ಮತ್ತೆ ಮಳೆಯ ವಾತಾವರಣ ಕಂಡುಬಂದಿತ್ತು. ಸಂಜೆ ವೇಳೆಗೆ ಮತ್ತೆ ಸಣ್ಣ ಪ್ರಮಾಣದಲ್ಲಿ ಮಳೆ ಕಾಣಿಸಿತ್ತು. ಜಿಲ್ಲೆಯಲ್ಲಿ ಕಿಲ್ಪಾಡಿಯಲ್ಲಿ 57 ಮಿಲಿ ಮೀಟರ್, ಕೋಟೆಕಾರ್ 56.5 ಮಿ.ಮೀ, ತಲಪಾಡಿ 56 ಮಿ.ಮೀ, ಬಾಳ 54.5 ಮಿ.ಮೀ, ಇಡ್ಕಿದು ಹಾಗೂ ಕೆಮ್ರಾಲ್‌ನಲ್ಲಿ 53.5 ಮಿ.ಮೀ, ಕಾವಳಪಡೂರು, ಬಾಳ್ತಿಲ, ಕಲ್ಮಡ್ಕಗಳಲ್ಲಿ 53 ಮಿ.ಮೀ, ಪಾಣಾಜೆಯಲ್ಲಿ 51.5 ಮಿ.ಮೀ. ಮಳೆ ದಾಖಲಾಗಿದೆ.

*ಕೇಂದ್ರೀಕೃತಗೊಂಡ ಮಾರುತಗಳು

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ. ಕುಂದಾಪುರ, ಗೋವಾ, ಉತ್ತರ ಕನ್ನಡ ಗಡಿಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು, ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಮತ್ತು ಗೋವಾಗಳಲ್ಲಿ ಹೆಚ್ಚಿನ ಗಾಳಿಯ ಮುನ್ಸೂಚನೆ ನೀಡಲಾಗಿದೆ. ಗಾಳಿ ಮಳೆಯ ಪರಿಚಲಯನೆ ಕೇರಳದ ಕೆಳ ಮತ್ತು ಮಧ್ಯಮ ಉಷ್ಣ ವಲಯದ ಮಟ್ಟದಲ್ಲಿದೆ. ಅದರ ಪ್ರಭಾವ ಮುಂದಿನ 3-4 ದಿನದ ನಂತರ ಗುಡುಗು, ಮಿಂಚು ಮತ್ತು ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಒಳನಾಡಿನಲ್ಲೂ ಮಳೆಯಾಗಲಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.