ಜಿಲ್ಲೆ

ಕೊಡಗಿನಲ್ಲಿ ಮುಂದುವರಿದ ಮಳೆಯ ಅಬ್ಬರ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊನೆಯ ಹಂತದಲ್ಲಿ ಅಬ್ಬರಿಸಿದ್ದ ಪುನರ್ವಸು ಮಳೆಯ ರೌದ್ರಾವತರನ್ನು ಶುಕ್ರವಾರದಿಂದ ಶುರುವಾಗಿರುವ ಪುಷ್ಯ ಮಳೆಯೂ ಜಿಲ್ಲೆಯಲ್ಲಿ ಮುಂದುವರಿಸಿದೆ. ಭಾರತೀಯ ಹವಾಮಾನ ಇಲಾಖೆ ಶನಿವಾರವೂ ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲೆಯ ವಿವಿಧೆಡೆ ಮುಂಜಾನೆಯಿAದಲೇ ಮಳೆ ಜೋರಾಗಿ ಬರುತ್ತಿದ್ದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ದಿನಪೂರ್ತಿ ಮಳೆಯ ವಾತಾವರಣ ಇತ್ತು. ಆಗಾಗ್ಗೆ ಮಂಜು ಕವಿದು, ಗಾಳಿ-ಚಳಿಯೂ ಜನ ಜೀವನ ತತ್ತರಿಸುವಂತೆ ಮಾಡಿತು.
ಜೀವನದಿ ಕಾವೇರಿ ಉಗಮಸ್ಥಾನ ಬ್ರಹ್ಮಗಿರಿ ಶ್ರೇಣಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ಮತ್ತು ಕನ್ನಿಕೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದಾಗಿ ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಶುಕ್ರವಾರವೂ ತ್ರಿವೇಣಿ ಸಂಗಮ ಜಲಾವೃತವಾಗಿತ್ತು. ಶ್ರೀ ಭಗಂಡೇಶ್ವರ ದೇವಾಲಯದ ತನಕವೂ ಪ್ರವಾಹದ ನೀರು ವ್ಯಾಪಿಸಿತ್ತು. ಭಾಗಮಂಡಲ-ನಾಪೋಕ್ಲು ಮತ್ತು ಭಾಗಮಂಡಲ-ಮಡಿಕೇರಿ ರಸ್ತೆಯ ಮೇಲೆ ನೀರು ಇತ್ತು.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು ಶುಕ್ರವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಈ ವರ್ಷದಲ್ಲೇ ದಾಖಲೆಯ 24,400 ಕ್ಯೂಸೆಕ್ ನೀರಿನ ಒಳಹರಿವು ಜಲಾಯಕ್ಕೆ ಹರಿದು ಬಂತು. ಸಂಜೆ 6 ಗಂಟೆಗೆ ಒಳಹರಿವಿನ ಪ್ರಮಾಣ ಸ್ವಲ್ಪ ಇಳಿಮುಖವಾಗಿದ್ದು, 23,760 ಕ್ಯೂಸೆಕ್ ನೀರು ಅಣೆಕಟ್ಟೆಗೆ ಹರಿದು ಬರುತ್ತಿತ್ತು. 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. 2,859 ಅಡಿ ಎತ್ತರದ ಅಣೆಕಟ್ಟೆಯಲ್ಲಿ 2,854.38 ಅಡಿಗಳಷ್ಟು ನೀರಿದೆ.
ಜಿಲ್ಲೆಯ ಹಲವೆಡೆ ಮಳೆಹಾನಿ ಮುಂದುವರಿದಿದೆ. ಕುಶಾಲನಗರ ಹೋಬಳಿ ದೊಡ್ಡತ್ತೂರು ಗ್ರಾಮದ ಲಕ್ಷ್ಮಣ ಕಾಳಯ್ಯ ಎಂಬವರ ಮನೆಯ ಗೋಡೆಗೆ ಮಳೆಯಿಂದ ಹಾನಿಯಾಗಿದ್ದು, ಕಂದಾಯ ಪರಿವೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರಪೇಟೆ ತಾಲೂಕು ಶನಿವಾರಸಂತೆ ಹೋಬಳಿಯ ಮಾಲಂಬಿ ಗ್ರಾಮದ ಯಮುನಾ ರಾಮ್ ಶೆಟ್ಟಿ ಎಂಬವರ ವಾಸದ ಮನೆಯ ಮೇಲೆ ಭಾರಿ ಮಳೆ ಗಾಳಿಗೆ ಮರ ಬಿದ್ದು ಮನೆಗೆ ಹಾನಿಯಾಗಿದೆ.

ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದ ಶಾರದಮ್ಮ ಮತ್ತು ಬೆಟ್ಟಯ್ಯ ಎಂಬವರ ವಾಸದ ಮನೆಯು ತೀವ್ರ ಮಳೆಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇವರಿಗೆ ತಾತ್ಕಾಲಿಕವಾಗಿ ವಾಸಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.
ಕುಶಾಲನಗರ ಹೋಬಳಿ ಗೊಂದಿಬಸವನಹಳ್ಳಿ ಗ್ರಾಮದ ರೊಂಡೆ ಕೆರೆಯ ಏರಿ ಒಡೆದು ಕೆರೆಯ ನೀರು ಪಕ್ಕದ ಜಮೀನು ಮತ್ತು ಬಡಾವಣೆಗಳಿಗೆ ಹರಿದಿದೆ. ಇದರಿಂದ ಕೆಳಪ್ರದೇಶದಲ್ಲಿದ್ದ ಗದ್ದೆ, ತೋಟಗಳಿಗೆ ಹಾನಿಯಾಗಿದೆ. ಕಾರು ಚಾಲಕರ ಬಡಾವಣೆ ನೀರಿನಿಂದ ಆವೃತ್ತವಾಗಿತ್ತು.

ಚೆಟ್ಟಳ್ಳಿ - ಮಡಿಕೇರಿ ರಸ್ತೆ ಅಭ್ಯಾಲ ಬಳಿ ಮಣ್ಣು ಕುಸಿದು ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿಯಲ್ಲಿ ಬರೆ ಕುಸಿತ ಪ್ರಕರಣ ವರದಿಯಾಗಿದ್ದು, ನಂತರ ಈ ಪ್ರದೇಶದಲ್ಲಿ ಮಣ್ಣು ತೆರವುಗೊಳಿಸಲಾಗಿದೆ. ಮಳೆಯಿಂದ ಹಾನಿಗೆ ಒಳಗಾಗಿದ್ದ ವಿರಾಜಪೇಟೆ-ಕರಡ-ಮಡಿಕೇರಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸಲಾಗಿದೆ.

ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಹಾಕತ್ತೂರು ಸಮೀಪದ ಚೂರಿಕಾಡು -ತೊಂಬತ್ತು ಮನೆ ರಸ್ತೆಯಲ್ಲಿ ನಿರ್ಮಿಸಿದ್ದ ತಡೆಗೋಡೆ ಮಳೆಯಿಂದಾಗಿ ರಸ್ತೆ ಬದಿ ಕುಸಿದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭಾಗಮಂಡಲದ ನೀರುಕಾಡು ಎಂಬಲ್ಲಿ ರಸ್ತೆ ಮಧ್ಯೆ ನೀರಿನ ಒರತೆ ಕಾಣಿಸಿಕೊಂಡಿದ್ದರಿAದ ಇಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಆಗಿತ್ತು. ನಂತರ ಇದನ್ನು ಸರಿಪಡಿಸಲಾಯಿತು.
ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 105.71 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 29.68 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1348.51 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 637.16 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 152.57 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 130.75 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 72.4 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 115.05 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 57.8 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ ಕಸಬಾ 135.40, ನಾಪೋಕ್ಲು 150.20, ಸಂಪಾಜೆ 102.50, ಭಾಗಮಂಡಲದಲ್ಲಿ ಅತ್ಯಧಿಕ 222.20, ವಿರಾಜಪೇಟೆ 113, ಅಮ್ಮತ್ತಿ 148.50, ಹುದಿಕೇರಿ 84.60, ಶ್ರೀಮಂಗಲ 85, ಪೊನ್ನಂಪೇಟೆ 74, ಬಾಳೆಲೆ 46.05, ಸೋಮವಾರಪೇಟೆ ಕಸಬಾ 112.20, ಶನಿವಾರಸಂತೆ 90, ಶಾಂತಳ್ಳಿ 183, ಕೊಡ್ಲಿಪೇಟೆ 75, ಕುಶಾಲನಗರ 44.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 71 ಮಿ.ಮೀ.ಮಳೆಯಾಗಿದೆ.